ಕಾಸರಗೋಡು: ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಎ.ಎ.ರಶೀದ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಅದಾಲತ್‍ನಲ್ಲಿ ಮೂರು ದೂರುಗಳಿಗೆ ಪರಿಹಾರ ಕಲ್ಪಿಸಲಾಯಿತು. ಒಟ್ಟು ಆರು ದೂರುಗಳನ್ನು ಪರಿಗಣಿಸಲಾಗಿದ್ದು, ಉಳಿದ ಮೂರು ದೂರುಗಳನ್ನು ಮುಂದಿನ ಅದಾಲತ್‍ನಲ್ಲಿ ಪರಿಗಣಿಸಲು ತೀರ್ಮಾನಿಸಲಾಯಿತು.
ನಿರುದ್ಯೋಗ ವೇತನ ನೀಡದಿರುವ ಬಗ್ಗೆ ಬದಿಯಡ್ಕ ನಿವಾಸಿ ಈ ಹಿಂದೆ ಆಯೋಗಕ್ಕೆ ದೂರು ನೀಡಿದ್ದರು. ದೂರಿನ ಮೇರೆಗೆ ಜಿಲ್ಲಾಧಿಕಾರಿ ಹಾಗೂ ಕಾಸರಗೋಡು ತಹಸೀಲ್ದಾರ್ ಕ್ರಮ ಜರುಗಿಸಿ ಸಮಸ್ಯೆ ಪರಿಹರಿಸಲಾಗಿದೆ ಎಂದು ಆಯೋಗ ತಿಳಿಸಿದೆ. ಮುರಿಯಾನಾವಿ ನಿವಾಸಿಯೊಬ್ಬರು ತಮ್ಮ ಜಮೀನಿನಲ್ಲಿ ರಸ್ತೆ ತಡೆ ನಡೆಸಿ ಸಂಚಾರ ಸ್ವಾತಂತ್ರ್ಯವನ್ನು ನಿರಾಕರಿಸಿದ್ದಾರೆ ಎಂಬ ದೂರು ಪರಿಗಣಿಸಿದ ಅದಾಲತ್, ಈ ಬಗ್ಗೆ ಹೈಕೋರ್ಟ್‍ನಲ್ಲಿ ಇತರ ದೂರುಗಳು ಬಾಕಿ ಇರುವ ಕಾರಣ ಈ ದೂರಿನ ಮೇಲಿನ ಆಯೋಗದ ವಿಚಾರಣೆಯನ್ನು ಮುಕ್ತಾಯಗೊಳಿಸಲಾಯಿತು. ಬದಿಯಡ್ಕ ಮೂಲದವರ ದೂರಿನನ್ವಯ ಅತ್ಯಂತ ದುರ್ಬಲ ವರ್ಗಕ್ಕೆ ಸೇರ್ಪಡೆಗೊಳಿಸಬೇಕೆಂಬ ಅರ್ಜಿಯ ಬಗ್ಗೆ ತನಿಖೆ ನಡೆಸಿ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಯಿತು. ಅಲ್ಪಸಂಖ್ಯಾತರ ಆಯೋಗದ ಸದಸ್ಯರಾದ ಎ ಸೈಫುದ್ದೀನ್, ಪಿ ರೋಸಾ, ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಕೆ. ನವೀನ್ ಬಾಬು ಉಪಸ್ಥಿತರಿದ್ದರು.