ಖಾನ್ ಯೂನಿಸ್: ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಶುಕ್ರವಾರ ಬೆಳಿಗ್ಗೆಯಿಂದಲೇ ವಾಯುದಾಳಿ ನಡೆಸಿದೆ. ಪ್ಯಾಲೆಸ್ಟೀನ್ ನಾಗರಿಕರಿಗೆ ಆಶ್ರಯ ಪಡೆಯಲು ಸೂಚಿಸಿದ್ದ ಸ್ಥಳಗಳ ಮೇಲೆಯೂ ಅದು ದಾಳಿ ನಡೆಸಿದೆ. ಅಲ್ಲದೆ, ಲೆಬನಾನ್ ಜೊತೆಗಿನ ಗಡಿಗೆ ಹೊಂದಿಕೊಂಡಿರುವ ಪಟ್ಟಣವೊಂದರಲ್ಲಿನ ನಿವಾಸಿಗಳ ಸ್ಥಳಾಂತರ ಆರಂಭಿಸಿದೆ.
ಹಮಾಸ್ ಬಂಡುಕೋರ ಸಂಘಟನೆಯ ಜೊತೆಗಿನ ಯುದ್ಧ ಕೊನೆಗೊಂಡ ನಂತರದಲ್ಲಿ ಗಾಜಾದಲ್ಲಿ ನಾಗರಿಕರ ಮೇಲೆ ನಿಯಂತ್ರಣ ಹೊಂದುವ ಯಾವುದೇ ಉದ್ದೇಶ ಇಲ್ಲ ಎಂದು ಇಸ್ರೇಲ್ ರಕ್ಷಣಾ ಸಚಿವ ಯುವಾವ್ ಗ್ಯಾಲಂಟ್ ಹೇಳಿದ್ದಾರೆ. ಯುದ್ಧವು ಮೂರು ಹಂತಗಳಲ್ಲಿ ನಡೆಯಲಿದೆ ಎಂಬುದು ಇಸ್ರೇಲ್‌ನ ನಿರೀಕ್ಷೆ ಎಂದು ಗ್ಯಾಲಂಟ್ ಹೇಳಿದ್ದಾರೆ. ವಾಯುದಾಳಿ, ಭೂದಾಳಿಯು ಯುದ್ಧದ ಮೊದಲ ಹಂತ.
ನಂತರದ ಹಂತದಲ್ಲಿ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಎದುರಾಗಬಹುದಾದ ಪ್ರತಿರೋಧವನ್ನು ಮಣಿಸುವುದು ಹಾಗೂ ಕೊನೆಯ ಹಂತದಲ್ಲಿ ಗಾಜಾ ಪಟ್ಟಿಯ ಮೇಲಿನ ಹೊಣೆಗಾರಿಕೆಯನ್ನು ಬಿಟ್ಟುಕೊಡುವುದು.
ಗಾಜಾ ಪಟ್ಟಿಯ ದಕ್ಷಿಣದಲ್ಲಿ ಇರುವ ಖಾನ್ ಯೂನಿಸ್ ನಗರದ ಮೇಲೆ ಭಾರಿ ಪ್ರಮಾಣದ ವಾಯುದಾಳಿ ನಡೆದಿದೆ ಎಂದು ಪ್ಯಾಲೆಸ್ಟೀನ್ ನಾಗರಿಕರು ತಿಳಿಸಿದ್ದಾರೆ. ಹಮಾಸ್ ಸಂಘಟನೆಗೆ ಸಂಬಂಧಿಸಿದ ನೂರಕ್ಕೂ ಹೆಚ್ಚಿನ ಗುರಿಗಳ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ.
ಗಾಜಾ ಪಟ್ಟಿಯ ದಕ್ಷಿಣ ಭಾಗವು ಸುರಕ್ಷಿತ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಈಚೆಗೆ ಹೇಳಿದ್ದರು. ಆದರೆ ಇಸ್ರೇಲ್ ಮಿಲಿಟರಿ ವಕ್ತಾರ ನಿರ್ ದಿನಾರ್ ಅವರು 'ಯಾವ ವಲಯವೂ ಸುರಕ್ಷಿತವಲ್ಲ' ಎಂದು ತಿಳಿಸಿದ್ದಾರೆ.
ಗಾಜಾ ಪಟ್ಟಿಯ ಎಲ್ಲ ಕಡೆಗಳಲ್ಲಿಯೂ ವಾಯುದಾಳಿ ನಡೆಯುತ್ತಿರುವ ಕಾರಣ, ಉತ್ತರ ಭಾಗದಿಂದ ದಕ್ಷಿಣಕ್ಕೆ ಬಂದಿದ್ದವರ ಪೈಕಿ ಕೆಲವರು ಮತ್ತೆ ಉತ್ತರದ ಕಡೆ ಸಾಗುತ್ತಿರುವಂತೆ ಕಾಣುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಗಾಜಾದಲ್ಲಿ ಆಸ್ಪತ್ರೆಗಳು ಅಗತ್ಯ ವಸ್ತುಗಳ ಕೊರತೆ ಎದುರಿಸುತ್ತಿರುವ ಕಾರಣ, ಇರುವ ವಸ್ತುಗಳನ್ನು ಬಹಳ ಎಚ್ಚರಿಕೆಯಿಂದ ಬಳಸುತ್ತಿವೆ.
ಆಸ್ಪತ್ರೆಗಳಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಲು ಮೊಬೈಲ್ ಫೋನ್‌ನ ಬೆಳಕನ್ನು ಆಶ್ರಯಿಸುತ್ತಿದ್ದಾರೆ, ಗಾಯಗಳಿಗೆ ಚಿಕಿತ್ಸೆ ನೀಡಲು ವಿನೆಗರ್ ಬಳಸುತ್ತಿದ್ದಾರೆ. ರಫಾ ಗಡಿಯಿಂದ ಗಾಜಾ ಪಟ್ಟಿಯೊಳಗೆ ಅಗತ್ಯ ವಸ್ತುಗಳನ್ನು ಸಾಗಿಸಲು ರಸ್ತೆ ರಿಪೇರಿ ಕೆಲಸವು ಶುಕ್ರವಾರ ನಡೆದಿದೆ.
ರಫಾ ಗಡಿಗೆ ಶುಕ್ರವಾರ ಭೇಟಿ ನೀಡಿದ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಯಂಟೊನಿಯೊ ಗುಟೆರಸ್ ಅವರು, ಅಗತ್ಯ ವಸ್ತುಗಳನ್ನು ಆದಷ್ಟು ಬೇಗ ಗಾಜಾ ಪಟ್ಟಿಯೊಳಕ್ಕೆ ಒಯ್ಯಬೇಕು ಎಂದು ಆಗ್ರಹಿಸಿದ್ದಾರೆ.
ಲೆಬನಾನ್ ಗಡಿಯಿಂದ ಇಸ್ರೇಲ್‌ನತ್ತ ರಾಕೆಟ್ ದಾಳಿ ನಡೆಸುತ್ತಿರುವ ಹಿಜ್ಬುಲ್ಲಾ ಸಂಘಟನೆಯು, ಹಮಾಸ್ ನಾಶಕ್ಕೆ ಇಸ್ರೇಲ್ ಮುಂದಾದರೆ ತಾನೂ ಇಸ್ರೇಲ್ ವಿರುದ್ಧ ಸಮರ ಸಾರಬೇಕಾಗಬಹುದು ಎಂಬ ಸೂಚನೆ ನೀಡಿದೆ.
ಅಕ್ಟೋಬರ್ 7ರ ನಂತರದಲ್ಲಿ ಗಾಜಾ ಪಟ್ಟಿಯಲ್ಲಿ 4,137 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಹೆಚ್ಚಿನವರು ಮಹಿಳೆಯರು, ಮಕ್ಕಳು ಮತ್ತು ಹಿರಿಯರು. ಇಸ್ರೇಲ್‌ನಲ್ಲಿ 1,400ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ದಾಳಿಯಲ್ಲಿ ಗಾಯಗೊಂಡಿರುವ ಮಗುವನ್ನು ಗಾಜಾ ಪಟ್ಟಿಯ ಖಾನ್ ಯೂನಿಸ್‌ನಲ್ಲಿನ ನಾಸೆರ್ ಆಸ್ಪತ್ರೆಯಲ್ಲಿ ತಾಯಿ ಸಂತೈಸಿದರು