ನವದೆಹಲಿ: ಭಾರತದಲ್ಲಿ ಖಲೀಸ್ಥಾನಿಗಳಿಗೆ ಸಹಕಾರ ನೀಡುತ್ತಿದ್ದ ಸಿಖ್ ಗೆ ಕೆನಡಾ ಪ್ರವೇಶಿಸಲು ಅನುಮತಿ ನೀಡಬೇಕು ಎಂದು ಕೆನಡಾದ ವಲಸೆ ಟ್ರಿಬ್ಯುನಲ್ ಹೇಳಿದೆ.
ದಶಕಗಳ ಕಾಲ ಕಮಲಜಿತ್ ರಾಮ್ ಎಂಬಾತ ಬಹುಪಾಲು ಅವಶ್ಯಕತೆ ಮತ್ತು ಪ್ರತೀಕಾರದ ಭಯದಿಂದ ಖಲೀಸ್ಥಾನಿ ಉಗ್ರರಿಗೆ ಸಹಾಯ ಮಾಡಿ ಆಶ್ರಯ ನೀಡುತ್ತಿದ್ದ ಎಂದು ವಲಸೆ ಮತ್ತು ನಿರಾಶ್ರಿತರ ಮಂಡಳಿಯ ನ್ಯಾಯಮಂಡಳಿ ಸದಸ್ಯ ಹೈಡಿ ವರ್ಸ್ಫೋಲ್ಡ್ ಹೇಳಿರುವುದನ್ನು ಮಾಧ್ಯಮವೊಂದು ಪ್ರಕಟಿಸಿದೆ.
ಖಲಿಸ್ತಾನಿ ಉಗ್ರಗಾಮಿಗಳಿಗೆ ಸುರಕ್ಷಿತ ಆಶ್ರಯ ಮತ್ತು ಲಾಜಿಸ್ಟಿಕ್ ಬೆಂಬಲವನ್ನು ಒದಗಿಸಿದ ಎಂಬ ಕಾರಣ ಇಟ್ಟುಕೊಂಡು ಭಾರತೀಯ ಪ್ರಜೆ ಕಮಲಜಿತ್ ರಾಮ್ ಕೆನಡಾಕ್ಕೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಲು ಸರ್ಕಾರಕ್ಕೆ ಆಧಾರವಿಲ್ಲ ಎಂದು ನ್ಯಾಯಮಂಡಳಿ ಹೇಳಿದೆ.
1982 ಮತ್ತು 1992 ರ ನಡುವೆ ಭಾರತದಲ್ಲಿನ ತನ್ನ ಜಮೀನಿನಲ್ಲಿ ಶಸ್ತ್ರಸಜ್ಜಿತ ಸಿಖ್ ಉಗ್ರಗಾಮಿಗಳಿಗೆ ಆಶ್ರಯ ಮತ್ತು ಆಹಾರವನ್ನು ನೀಡಿದ್ದಾಗಿ ಸಂದರ್ಶನವೊಂದರಲ್ಲಿ ಕೆನಡಾ ಬಾರ್ಡರ್ ಸರ್ವಿಸಸ್ ಏಜೆನ್ಸಿ ಅಧಿಕಾರಿಗಳಿಗೆ ಹೇಳಿದ ನಂತರ ಫೆಡರಲ್ ಸರ್ಕಾರ ಕೆನಡಾದಿಂದ ಕಮಲ್ ಜಿತ್ ರಾಮ್ ನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಂಡಿತ್ತು.