ನವದೆಹಲಿ: ಉಪ ಅಡ್ಮಿರಲ್ ತರುಣ್ ಸೋಬ್ತಿ ನೌಕಾ ಪಡೆ ಸಿಬ್ಬಂದಿಗಳ ಉಪಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರು.
ಉಪ ಅಡ್ಮಿರಲ್ ಸಂಜಯ್ ಮಹಿಂದ್ರು ಅವರು 38 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಅವರ ಉತ್ತರಾಧಿಕಾರಿಯಾಗಿ ತರುಣ್ ಸೋಬ್ತಿ ಅಧಿಕಾರ ಸ್ವೀಕರಿಸಿದ್ದಾರೆ.
ಉಪ ಅಡ್ಮಿರಲ್ ಸೋಬ್ತಿ ಅವರು 1988 ರ ಜುಲೈ 1 ರಂದು ನೌಕಾಪಡೆಗೆ ಸೇರ್ಪಡೆಯಾದರು. 35 ವರ್ಷಗಳ ವೃತ್ತಿ ಜೀವನದಲ್ಲಿ ಸೋಬ್ತಿ ಅವರು ಕಮಾಂಡ್ ಮತ್ತು ಸಿಬ್ಬಂದಿ ವಿಭಾಗದಲ್ಲಿ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಐಎನ್ಎಸ್ ನಿಶಾಂಕ್, ಐಎನ್ಎಸ್ ಕೋರಾ, ಐಎನ್ಎಸ್ ಕೋಲ್ಕತಾಗಳಲ್ಲಿಯೂ ಸೋಬ್ತಿ ಕಾರ್ಯನಿರ್ವಹಿಸಿದ್ದಾರೆ.
ಸಿಬ್ಬಂದಿ ಅಗತ್ಯತೆಗಳ ನಿರ್ದೇಶನಾಲಯ ಮತ್ತು ಸಿಬ್ಬಂದಿ ನಿರ್ದೇಶನಾಲಯದಲ್ಲಿ ಮತ್ತು ಮಾಸ್ಕೋದ ಭಾರತೀಯ ರಾಯಭಾರ ಕಚೇರಿಯಲ್ಲಿ ನೌಕಾಪಡೆಯ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ.
2019 ರಲ್ಲಿ ರಿಯರ್ ಅಡ್ಮಿರಲ್ ಹುದ್ದೆಗೆ ಬಡ್ತಿ ಪಡೆದ ನಂತರ, ಅವರನ್ನು ಎಜಿಮಲದ ಇಂಡಿಯನ್ ನೇವಲ್ ಅಕಾಡೆಮಿಯಲ್ಲಿ ಡೆಪ್ಯೂಟಿ ಕಮಾಂಡೆಂಟ್ ಮತ್ತು ಮುಖ್ಯ ಬೋಧಕರಾಗಿ, ನಂತರ ಈಸ್ಟರ್ನ್ ಫ್ಲೀಟ್‌ನ ಪ್ಲಾಗ್ ಆಫೀಸರ್ ನ್ನಾಗಿ ನೇಮಕ ಮಾಡಲಾಗಿತ್ತು.
2021 ರಲ್ಲಿ ವೈಸ್ ಅಡ್ಮಿರಲ್ ಹುದ್ದೆಗೆ ಏರಿದ ನಂತರ, ಅವರು 'ಪ್ರಾಜೆಕ್ಟ್ ಸೀಬರ್ಡ್' ನ ಡೈರೆಕ್ಟರ್ ಜನರಲ್ ಆಗಿ ಅಧಿಕಾರ ವಹಿಸಿಕೊಂಡರು, ಅದರ ಅಡಿಯಲ್ಲಿ ಭಾರತ ಕಾರವಾರ ನೌಕಾ ನೆಲೆಯನ್ನು ಅಭಿವೃದ್ಧಿಪಡಿಸುತ್ತಿದೆ.