ಕುಂಬಳೆ: ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬ ಅವರ ತವರು ನೆಲದಲ್ಲಿ ಯಕ್ಷಗಾನದ ಕಂಪು ಪಸರಿಸಲು ಸಂಚಾರಿ ಯಕ್ಷಗಾನ ಚಿಕ್ಕ ಮೇಳವೊಂದು ಮನೆ ಮನೆ ಸಂದರ್ಶನ ನಡೆಸಿ ಕಲಾ ಪ್ರದರ್ಶನ ನೀಡುತ್ತಿದೆ. ಪೆರ್ಮುದೆ ಕಂಬಾರು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಮತ್ತು ಜಟಾಧಾರಿ ದೈವಾನುಗ್ರಹದೊಂದಿಗೆ ಸಂಚಾರ ನಡೆಸುವ ಈ ಚಿಕ್ಕಮೇಳ ಕಳೆದ ನಾಲ್ಕು ವರ್ಷಗಳಿಂದ ಕಲಾಸೇವೆ ನಡೆಸಿಕೊಂಡು ಬರುತ್ತಿದೆ.
ಪ್ರತಿ ದಿನ ಸಂಜೆ 6ರಿಂದ ರಾತ್ರಿ 11.30ರ ವರೆಗೆ ಪ್ರತಿ ಮನೆಗೆ ತೆರಳಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಯಕ್ಷಗಾನ ಪ್ರದರ್ಶನ ನೀಡುತ್ತಿದೆ. ಯಕ್ಷಗಾನ ಕಲಾವಿದ ಕೃಷ್ಣ ಶೆಟ್ಟಿ ನೀರ್ಚಾಲ್ ಅವರ ಸಂಚಾಲಕತ್ವದಲ್ಲಿ ನಡೆಯುತ್ತಿರುವ ಚಿಕ್ಕಮೇಳಕ್ಕೆ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರಬುದ್ದ ಕಲಾವಿದರನ್ನೊಳಗೊಂಡ ತಂಡದೊಂದಿಗೆ ಪರ್ಯಟನೆ ನಡೆಸುವ ಚಿಕ್ಕಮೇಳ, ಯಕ್ಷಗಾನದ ಬಗ್ಗೆ ಮಕ್ಕಳಲ್ಲಿ ವಿಶೇಷ ಆಸಕ್ತಿಯನ್ನೂ ಮೂಡಿಸುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಚಿಕ್ಕಮೇಳ ನಾಡಿನೆಲ್ಲೆಡೆ ಸಂಚರಿಸಿ ಯಕ್ಷಗಾನ ಪ್ರದರ್ಶನ ನೀಡುತ್ತಿದೆ. ಚಿಕ್ಕಮೇಳ ಮನೆಗೆ ಆಗಮಿಸುವ ಬಗ್ಗೆ ಒಂದು ದಿನ ಮುಂಚಿತವಾಗಿ ಅಥವಾ ಆಯಾ ದಿನ ಬೆಳಗ್ಗೆ ಕರಪತ್ರ ನೀಡಿ, ಸಮ್ಮತಿ ಸೂಚಿಸುವವರ ಮನೆಗಳಿಗೆ ವೇಷಧಾರಿಗಳೊಂದಿಗೆ ತೆರಳಿ ಯಕ್ಷಗಾನ ಕಲಾಸೇವೆ ನಡೆಸಿಕೊಡಲಗುತ್ತದೆ. ಬೆಳ್ತಿಗೆ ಅಕ್ಕಿ, ತೆಂಗಿನ ಕಾಯಿ, ವೀಳ್ಯದೆಲೆ, ಅಡಕೆ, ಒಂದಷ್ಟು ಕಾಣಿಕೆ ಸಮರ್ಪಿಸುವುದು ವಾಡಿಕೆ.
ಜೂನ್ 11ರಿಂದ ನ. 11ರ ವರೆಗೆ ಚಿಕ್ಕಮೇಳ ತಿರುಗಾಟ ನಡೆಸಲಿದೆ.
ಚಿಕ್ಕ ಮೇಳದ ಬಗ್ಗೆ ನಾಡಿನಾದ್ಯಂತ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಕಳೆದ ವರ್ಷ ಚಿಕ್ಕಮೇಳ ಸಂಚಾರ ನಡೆಸಿ ಲಭಿಸಿದ ಕ್ವಿಂಟಾಲ್ ಬೆಳ್ತಿಗೆ ಅಕ್ಕಿ, 2ಸವಿರಕ್ಕೂ ಮಿಕ್ಕಿ ತೆಂಗಿನ ಕಾಯಿ ಹಾಗೂ 90ಸಾವಿರ ರೂ. ನಗದನ್ನು ಕಾಣಿಕೆ ರೂಪದಲ್ಲಿ ಕಂಬಾರು ದೇವಸ್ಥಾನಕ್ಕೆ ಹಸ್ತಾಂತರಿಸಿರುವುದಾಗಿ ಸಂಚಾಲಕ ಕೃಷ್ಣ ಶೆಟ್ಟಿ ನೀರ್ಚಾಲು ತಿಳಿಸುತ್ತಾರೆ.