ನವದೆಹಲಿ: ವಿವಾಹ ಸಂಬಂಧವು ಸರಿಪಡಿಸಲು ಆಗದಷ್ಟು ಹಾಳಾಗಿದೆ ಎಂಬುದು ಮಾತ್ರವೇ ಸಂವಿಧಾನದ 142ನೆಯ ವಿಧಿಯ ಅಡಿಯಲ್ಲಿ ವಿವಾಹ ವಿಚ್ಛೇದನ ನೀಡುವುದಕ್ಕೆ ಕಾರಣವಾಗಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ವಿವಾಹ ವಿಚ್ಛೇದನ ಕೋರಿ ಸಲ್ಲಿಕೆಯಾಗುತ್ತಿರುವ ಅರ್ಜಿಗಳ ಸಂಖ್ಯೆ ಹೆಚ್ಚಾಗಿದೆಯಾದರೂ, ಭಾರತೀಯ ಸಮಾಜದಲ್ಲಿ ವಿವಾಹವನ್ನು ಇಂದಿಗೂ ಅಧ್ಯಾತ್ಮಿಕ ಮಹತ್ವದ, ಪವಿತ್ರವಾದ ಹಾಗೂ ಬೆಲೆ ಕಟ್ಟಲು ಸಾಧ್ಯವಿಲ್ಲದ ಬೆಸುಗೆ ಎಂಬಂತೆ ಕಾಣಲಾಗುತ್ತದೆ ಎಂದು ಕೋರ್ಟ್ ಹೇಳಿದೆ.
ವಿವಾಹ ಸಂಬಂಧವು ಕಾನೂನಿಗೆ ಮಾತ್ರ ಅನುಗುಣವಾಗಿ ಇರಬೇಕಾದುದಲ್ಲ. ಬದಲಿಗೆ, ಸಮಾಜದ ನಿಯಮಗಳಿಗೂ ಅದು ಅನುಗುಣವಾಗಿ ಇರಬೇಕಾಗಿರುತ್ತದೆ ಎಂದು ಹೇಳಿದ ಕೋರ್ಟ್, 89 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಲು ನಿರಾಕರಿಸಿತು.
ಸಂವಿಧಾನದ 142ನೆಯ ವಿಧಿಯು ಸುಪ್ರೀಂ ಕೋರ್ಟ್‌ಗೆ ನೀಡಿರುವ ಅಧಿಕಾರವನ್ನು ಬಳಸಿ, ತಮಗೆ ವಿವಾಹ ವಿಚ್ಛೇದನ ನೀಡಬೇಕು ಎಂದು ನಿವೃತ್ತ ವಿಂಗ್ ಕಮಾಂಡರ್ ಒಬ್ಬರು ಅರ್ಜಿ ಸಲ್ಲಿಸಿದ್ದರು. 'ನಾನು ಮತ್ತು ಪತ್ನಿ ಹಲವು ವರ್ಷಗಳಿಂದ ಪ್ರತ್ಯೇಕವಾಗಿ ವಾಸವಿದ್ದೇವೆ' ಎಂದು ಅವರು ಹೇಳಿದ್ದರು. ಆದರೆ ವಿಚ್ಛೇದನಕ್ಕೆ ತನ್ನ ಸಮ್ಮತಿ ಇಲ್ಲ ಎಂದು ಹೇಳಿದ್ದ ಪತ್ನಿ, 'ವಿಚ್ಛೇದಿತೆ' ಎಂಬ ಹಣೆಪಟ್ಟಿ ಹೊತ್ತುಕೊಂಡು ಸಾಯಲು ತನಗೆ ಇಷ್ಟವಿಲ್ಲ ಎಂದು ತಿಳಿಸಿದ್ದರು.
ನಿವೃತ್ತ ವಿಂಗ್ ಕಮಾಂಡರ್ 1996ರಲ್ಲಿ ಮೊದಲ ಬಾರಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. '1984ರಲ್ಲಿ ನನಗೆ ಮದ್ರಾಸ್‌ಗೆ (ಈಗಿನ ಚೆನ್ನೈ) ವರ್ಗವಾದಾಗಿನಿಂದ ಪತ್ನಿಯು ನನ್ನನ್ನು ನೋಡಿಕೊಂಡಿಲ್ಲ. ವಾಯುಪಡೆಯ ಅಧಿಕಾರಿಗಳಿಗೆ ನನ್ನ ವಿರುದ್ಧ ದೂರು ನೀಡಿ ನನ್ನ ಹೆಸರು ಹಾಳು ಮಾಡಲು ಯತ್ನಿಸಿದ್ದಾಳೆ' ಎಂದು ಕೂಡ ಅವರು ಅರ್ಜಿಯಲ್ಲಿ ಪತ್ನಿಯ ವಿರುದ್ಧ ದೂರಿದ್ದರು.
'1963ರಲ್ಲಿ ಮದುವೆ ಆದಾಗಿನಿಂದ ಮಕ್ಕಳನ್ನು ನೋಡಿಕೊಂಡಿದ್ದೇನೆ. ಈಗಲೂ ನಾನು ಪತಿಯ ಆರೈಕೆಗೆ ಸಿದ್ಧಳಿದ್ದೇನೆ. ಈ ವಯಸ್ಸಿನಲ್ಲಿ ಅವರನ್ನು ಬಿಟ್ಟುಬಿಡಲು ಸಿದ್ಧಳಿಲ್ಲ' ಎಂದು ಪತ್ನಿ ಹೇಳಿದರು. ವಿವಾಹ ಸಂಬಂಧವು ಮತ್ತೆ ಸರಿಪಡಿಸಲಾಗದಷ್ಟು ಹಾಳಾಗಿದ್ದರೂ, ಅದನ್ನು ವಿಚ್ಛೇದನದ ಮೂಲಕ ಕೊನೆಗೊಳಿಸಲೇಬೇಕೇ ಎಂಬ ಪ್ರಶ್ನೆಯನ್ನು ನ್ಯಾಯಪೀಠ ಕೇಳಿಕೊಂಡಿತು.
'ಸಮಾಜದಲ್ಲಿ ವಿವಾಹ ಸಂಬಂಧವು ಬಹಳ ಮಹತ್ವದ ಪಾತ್ರವನ್ನು ಹಾಗೂ ಮಹತ್ವದ ಸ್ಥಾನವನ್ನು ಹೊಂದಿದೆ ಎಂಬುದನ್ನು ಮರೆಯುವಂತಿಲ್ಲ. ವೈವಾಹಿಕ ಸಂಬಂಧದ ಕಾರಣದಿಂದಾಗಿಯೇ ಸಮಾಜದಲ್ಲಿ ಇತರ ಹಲವು ಸಂಬಂಧಗಳು ಜೀವ ಪಡೆಯುತ್ತವೆ. ಹೀಗಾಗಿ, ವಿವಾಹ ಸಂಬಂಧವು ಸರಿಪಡಿಸಲಾಗದಷ್ಟು ಹಾಳಾಗಿದೆ ಎಂಬುದೊಂದನ್ನೇ ಆಶ್ರಯಿಸಿ ಸಂವಿಧಾನದ 142ನೆಯ ವಿಧಿಯ ಅಡಿಯಲ್ಲಿ ವಿಚ್ಛೇದನ ನೀಡಲು ಆಗದು' ಎಂದು ಪೀಠ ಹೇಳಿತು.
ಪತ್ನಿಯ ಭಾವನೆಗಳಿಗೆ ಗೌರವ ನೀಡಿದ ಪೀಠವು, ವಿವೇಚನಾ ಅಧಿಕಾರವನ್ನು ಪತಿಯ ಪರವಾಗಿ ಚಲಾಯಿಸುವುದರಿಂದ ಪತ್ನಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ ಎಂದು ಕೂಡ ಹೇಳಿತು.