ಜೈಪುರ: ರಾಜಸ್ಥಾನ ವಿಧಾನಸಭೆ ಚುನಾವಣಾ ಕಣಕ್ಕೆ ಇದೇ ಮೊದಲ ಬಾರಿಗೆ ಆಲ್ ಇಂಡಿಯಾ ಮಾಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷ ಪ್ರವೇಶಿಸಿದೆ.
ಮುಸ್ಲಿಂ ಜನಸಂಖ್ಯೆಯೇ ಹಚ್ಚಿರುವ ಪ್ರದೇಶಗಳಲ್ಲಿ ಸದ್ಯಕ್ಕೆ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಎಐಎಂಐಎಂ, ಅಲ್ಪಸಂಖ್ಯಾತ ಸಮುದಾಯಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಡೆಗೆ ದೃಷ್ಟಿ ಹರಿಸುವುದಾಗಿ ಹೇಳಿದೆ.
ಫತೇಹ್‌ಪುರ ಕ್ಷೇತ್ರದಿಂದ ಜಾವೇದ್ ಆಲಿ ಖಾನ್, ಕಾಮ್‌ವನ್‌ನಿಂದ ಇಮ್ರಾನ್ ನವಾಬ್, ಜೈಪುರದ ಹವಾಮಹಲ್ ಕ್ಷೇತ್ರದಿಂದ ಜಮೀಲ್ ಖಾನ್ ಅವರನ್ನು ಕಣಕ್ಕಿಳಿಸಿದೆ.
ರಾಜ್ಯದ 30 ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧಿಸುವ ನಿರೀಕ್ಷೆ ಇದೆ ಎಂದು ಎಐಎಂಐಎಂನ ರಾಜ್ಯಾಧ್ಯಕ್ಷ ಜಮೀಲ್ ಖಾನ್ ಅವರು ತಿಳಿಸಿದ್ದಾರೆ.
ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ಅಕ್ಟೋಬರ್ 21ರಿಂದ 22ರ ವರೆಗೆ ರಾಜಸ್ಥಾನಕ್ಕೆ ಭೇಟಿ ನೀಡಿ, ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
'ಅಭಿವೃದ್ಧಿ ಕಾರ್ಯಸೂಚಿ ಜೊತೆಗೆ ನಾವು ಎಲ್ಲಾ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಎಲ್ಲರ ಬಳಿ ಹೋಗುತ್ತೇವೆ. ಕಳೆದ 25 ವರ್ಷಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಆಡಳಿತ ನಡೆಸುತ್ತಿವೆ. ಅಲ್ಪಸಂಖ್ಯಾತರು ವಾಸಿಸುವ ಪ್ರದೇಶಗಳಿಗೆ ಆ ಪಕ್ಷಗಳು ಭೇಟಿ ನೀಡುತ್ತವೆ. ಆದರೆ, ನಾವು ಎಂದಿಗೂ ಅಭಿವೃದ್ಧಿ ಹೊಂದದಂತೆ ನೋಡಿಕೊಂಡಿವೆ. ಮೂಲಭೂತ ಸೌಕರ್ಯಗಳಾದ ಶಾಲೆ, ಕುಡಿಯುವ ನೀರು, ಆಸ್ಪತ್ರೆಗಳು, ನೈರ್ಮಲ್ಯ ನಮಗೆ ಇನ್ನೂ ದೊರೆತಿಲ್ಲ. ಈ ಪ್ರದೇಶಗಳಲ್ಲಿ ಮಾದಕ ವಸ್ತು ಜಾಲ ಬಿಗಿಯಾಗುತ್ತಿದೆ' ಎಂದು ಜಮೀಲ್ ಖಾನ್ ಅವರು ಆರೋಪಿಸಿದ್ದಾರೆ.