ನವದೆಹಲಿ: ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ 21 ಅರ್ಜಿಗಳನ್ನು ಸಾಂವಿಧಾನಿಕ ಪೀಠ ವಜಾಗೊಳಿಸಿದೆ. ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠದಲ್ಲಿ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್.ರವೀಂದ್ರ ಭಟ್, ಹಿಮಾ ಕೊಹ್ಲಿ, ಪಿ.ಎಸ್.ನರಸಿಂಹ ಅವರಿದ್ದ ಪೀಠಕ್ಕೆ ಸಲ್ಲಿಕೆಯಾಗಿದ್ದ ವಿವಿಧ ಅರ್ಜಿಗಳ ಕುರಿತು 10 ದಿನಗಳ ಕಾಲ ವಿಚಾರಣೆ ನಡೆಸಿದ್ದ ಪೀಠವು, ಮೇ 11ರಂದು ತೀರ್ಪು ಕಾಯ್ದಿರಿಸಿತ್ತು. ಈ ಕುರಿತಂತೆ ಮಂಗಳವಾರ ತೀರ್ಪು ಪ್ರಕಟಿಸಿತು.
ತೀರ್ಪು ಪ್ರಕಟಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, 'ನ್ಯಾಯಾಲಯವು ಕಾನೂನುಗಳನ್ನು ಮಾಡುವುದಿಲ್ಲ. ಬದಲಿಗೆ ಅವುಗಳನ್ನು ವ್ಯಾಖ್ಯಾನಿಸುತ್ತದೆ. ಕೇವಲ ಸಂಸತ್ತು ಮಾತ್ರ ವಿಶೇಷ ವಿವಾಹ ಕಾಯ್ದೆಯಲ್ಲಿ ಬದಲಾವಣೆ ತರಬಹುದು. ಆದರೆ ಈ ಅಸಹಜ ಸಮುದಾಯ ತಮ್ಮ ಬದುಕು ಸಾಗಿಸುವಲ್ಲಿ ಯಾವುದೇ ತಾರತಮ್ಯ ಆಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಕೇಂದ್ರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳದ್ದು' ಎಂದು ಸೂಚಿಸಿದರು.
'ವಿಶೇಷ ವಿವಾಹ ಕಾಯ್ದೆ ವಿಷಯವನ್ನು ಸಂಸತ್ತು ನಿರ್ಧರಿಸಬೇಕು. ವಿಶೇಷ ವಿವಾಹ ಕಾಯ್ದೆಯ ಸೆಕ್ಷನ್ 4 ಅನ್ನು ರದ್ದುಪಡಿಸಿದರೆ ಪ್ರಗತಿಪರ ಶಾಸನದ ಪ್ರಯೋಜನಗಳನ್ನು ಕಳೆದುಕೊಳ್ಳಬೇಕಾಗುವ ಅಪಾಯವೂ ಇದೆ. ಇದು ದೇಶವನ್ನು ಸ್ವಾತಂತ್ರ್ಯ ಪೂರ್ವ ಯುಗಕ್ಕೆ ಕೊಂಡೊಯ್ಯಲಿದೆ. ಭಾರತೀಯ ಉತ್ತರಾಧಿಕಾರ ಕಾಯ್ದೆ ಅಥವಾ ಹಿಂದೂ ಉತ್ತರಾಧಿಕಾರ ಕಾಯ್ದೆಯನ್ನು ಒಮ್ಮೆ ಗಮನಿಸಿದರೆ ಈ ಪ್ರಕರಣವು ಶಾಸಕಾಂಗ ಕ್ಷೇತ್ರ ವ್ಯಾಪ್ತಿಗೆ ಸೇರುತ್ತದೆ ಎಂಬುದು ಸ್ಪಷ್ಟ' ಎಂದಿದ್ದಾರೆ.
'ವ್ಯಕ್ತಿಯ ಲಿಂಗವು ಅವರ ಲೈಂಗಿಕತೆಗೆ ಸಮನಾದುದಲ್ಲ. ಒಬ್ಬರ ಜೀವ ಸಂಗಾತಿಯನ್ನು ಆಯ್ಕೆ ಮಾಡುವ ವಿಷಯವು ಸಂವಿಧಾನದ 21ನೇ ವಿಧಿಯಡಿ ಒಬ್ಬರ ಬದುಕು ಮತ್ತು ಸ್ವಾತಂತ್ರ್ಯದ ಹಕ್ಕಿಗೆ ಸಂಬಂಧಿಸಿದ್ದಾಗಿದೆ. ಅದರಲ್ಲಿ ತಮ್ಮ ಬಾಳ ಸಂಗಾತಿಯ ಆಯ್ಕೆ ಮತ್ತು ಅದನ್ನು ದೃಢಪಡಿಸುವುದೂ ಒಳಗೊಂಡಿದೆ. ಇದನ್ನು ಗುರುತಿಸದಿರುವುದು ತಾರತಮ್ಯವೇ ಸರಿ' ಎಂದು ಮುಖ್ಯ ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ನ್ಯಾ. ರವೀಂದ್ರ ಭಟ್ ಅವರು, 'ಅಸಹಜ ಸಮುದಾಯದ ಸಲಿಂಗ ವಿವಾಹಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನು ಚೌಕಟ್ಟು ರಚಿಸದೇ, ಅನುಮತಿಯನ್ನು ನೀಡಲಾಗದು' ಎಂದು ಅಭಿಪ್ರಾಯಪಟ್ಟರು. ಪೀಠದಲ್ಲಿದ್ದ ಇತರ ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರ ನಿಲುವನ್ನು ಬೆಂಬಲಿಸಿದರು.ಈ ಸಮುದಾಯದ ಜನರ ಹಕ್ಕುಗಳನ್ನು ಕಾಯ್ದುಕೊಳ್ಳುವ ಕುರಿತು ಕೇಂದ್ರ ಸಮಿತಿ ರಚಿಸುವ ಕುರಿತು ಹಿರಿಯ ಸಾಲಿಸೆಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಾಲಯಕ್ಕೆ ತಿಳಿಸಿರುವುದನ್ನು ನ್ಯಾಯಾಲಯ ದಾಖಲಿಸಿಕೊಂಡಿದೆ ಎಂದು ನ್ಯಾ. ಚಂದ್ರಚೂಡ್ ಹೇಳಿದರು.
ಹಿರಿಯ ವಕೀಲರಾದ ಎ.ಎಂ.ಸಿಂಘ್ವಿ, ರಾಜು ರಾಮಚಂದ್ರನ್, ಕೆ.ವಿ.ವಿಶ್ವನಾಥನ್ (ಈಗ ಸುಪ್ರಿಂ ಕೋರ್ಟ್‌ನ ನ್ಯಾಯಮೂರ್ತಿ), ಆನಂದ್ ಗ್ರೋವರ್, ಸೌರಬ್ ಕೃಪಾಲ್ ಅವರು ಈ ಬಗ್ಗೆ ಕೋರ್ಟ್‌ನ ಮೆಟ್ಟಿಲೇರಿದ್ದ ವಿವಿಧ 21 ಅರ್ಜಿದಾರರ ಪರವಾಗಿ ವಾದ ಮಂಡಿಸಿದ್ದರು.
'ಈ ಕುರಿತ ತನ್ನ ಪ್ರಶ್ನೆಗೆ ಏಳು ರಾಜ್ಯಗಳು ಪ್ರತಿಕ್ರಿಯಿಸಿವೆ. ಈ ಪೈಕಿ ರಾಜಸ್ಥಾನ, ಆಂಧ್ರಪ್ರದೇಶ, ಅಸ್ಸಾಂ ರಾಜ್ಯಗಳು ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕು ಎಂಬ ಅರ್ಜಿದಾರರ ಮನವಿಗೆ ವಿರೋಧ ವ್ಯಕ್ತಪಡಿಸಿವೆ ಎಂದು ತಿಳಿಸಿತ್ತು.
'ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕು. ಪೂರಕವಾಗಿ 1954ರ ವಿಶೇಷ ವಿವಾಹ ಕಾಯ್ದೆಯ (ಎಸ್‌ಎಂಎ) ನಿಬಂಧನೆಗಳನ್ನು ಮರು ವ್ಯಾಖ್ಯಾನಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.
ಸಾಂವಿಧಾನಿಕ ಪೀಠದ ಅಭಿಪ್ರಾಯಗಳು
ಈ ಅಸಹಜ ಸಮುದಾಯದ ವಿರುದ್ಧ ತಾರತಮ್ಯ ನಡೆಯುತ್ತಿಲ್ಲ ಎಂಬುದನ್ನು ಆಡಳಿತ ಖಾತ್ರಿಪಡಿಸಿಕೊಳ್ಳಬೇಕು
ಸರಕು ಮತ್ತು ಸೇವೆಗಳ ಪ್ರವೇಶದಲ್ಲಿ ಇವರಿಗೆ ಯಾವುದೇ ತಾರತಮ್ಯ ಇರಕೂಡದು
ಅಸಹಜ ಸಮುದಾಯದ ಹಕ್ಕುಗಳ ಬಗ್ಗೆ ಸಾರ್ವಜನಿಕರನ್ನು ಜಾಗೃತಗೊಳಿಸಬೇಕು
ಈ ಅಸಹಜ ಸಮುದಾಯದ ದಂಪತಿಗಳಿಗಾಗಿ ಸುರಕ್ಷಿತ ಮನೆ ಅಥವಾ 'ಗರಿಮಾ ಗೃಹ್' ನಿರ್ಮಿಸಬೇಕು.
ಮಕ್ಕಳ ಲಿಂಗ ಪರಿವರ್ತನೆಗೆ ಬಲವಂತದ ಶಸ್ತ್ರಚಿಕಿತ್ಸೆ ನಡೆಸುವಂತಿಲ್ಲ
ಯಾವುದೇ ವ್ಯಕ್ತಿಯನ್ನು ಯಾವುದೇ ರೀತಿಯ ಹಾರ್ಮೋನುಗಳ ಬದಲಾವಣೆ ಚಿಕಿತ್ಸೆಗೆ ಒಳಗಾಗಲು ಬಲವಂತ ಮಾಡುವಂತಿಲ್ಲ
ಅಸಹಜ ಸಮುದಾಯದ ಜನರಿಗೆ ಕಿರುಕುಳ ನೀಡಬಾರದು ಅಥವಾ ಅವರ ಸ್ಥಳಕ್ಕೆ ಮರಳಲು ಪೊಲೀಸರು ಒತ್ತಾಯಿಸಬಾರದು.