ನವದೆಹಲಿ: ಹೆದ್ದಾರಿಗಳಲ್ಲಿ ಬಳಕೆದಾರರ ಶುಲ್ಕ ಪಾವತಿ ವೇಳೆ ಸಂಭವಿಸುವ ಘರ್ಷಣೆ ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತೆಯಾಗಿ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಇರುವ ಸಿಬ್ಬಂದಿಯು ಕಡ್ಡಾಯವಾಗಿ ಬಾಡಿ ವೋರ್ನ್ ಕ್ಯಾಮೆರಾಗಳನ್ನು ಬಳಸಬೇಕು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಸೂಚಿಸಿದೆ.
ವಾಹನ ಚಾಲಕರು ಶುಲ್ಕ ಪಾವತಿ ವೇಳೆ ಸಂಭವಿಸುವ ಘರ್ಷಣೆ ಅಥವಾ ವಿವಾದಕ್ಕೆ ಸಂಬಂಧಿಸಿದಂತೆ ಪ್ರಾಧಿಕಾರವು, ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (ಎಸ್‌ಒಪಿ) ಪ್ರಕಟಿಸಿದೆ. ಇದರಿಂದ ಸಿಬ್ಬಂದಿಯು ವ್ಯವಸ್ಥಿತ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಲಿದೆ.
ಪೊಲೀಸರ ಪರಿಶೀಲನೆಗೆ ಒಳಪಟ್ಟ ಸಿಬ್ಬಂದಿಯನ್ನಷ್ಟೇ ಟೋಲ್ ಪ್ಲಾಜಾಗಳಲ್ಲಿ ನಿಯೋಜಿಸಬೇಕು. ಅವರಿಗೆ ಬಳಕೆದಾರರ ಜೊತೆಗೆ ಸೌಜನ್ಯದಿಂದ ವರ್ತಿಸುವ ಬಗ್ಗೆ ತರಬೇತಿಯನ್ನೂ ನೀಡಬೇಕು. ಸಿಬ್ಬಂದಿಯು ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು ಎಂದು ಸೂಚಿಸಲಾಗಿದೆ.
ಹೆದ್ದಾರಿ ಬಳಕೆದಾರರು ಶುಲ್ಕ ಪಾವತಿ ಸಂಬಂಧ ಅಶಿಸ್ತು ಅಥವಾ ಏರುಧ್ವನಿಯಲ್ಲಿ ವಾಗ್ವಾದಕ್ಕೆ ಇಳಿದರೆ ಮೇಲ್ವಿಚಾರಕರು ಕೂಡಲೇ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಬೇಕು. ಒಂದು ವೇಳೆ ಶುಲ್ಕ ಪಾವತಿಸಲು ನಿರಾಕರಿಸಿದರೆ ಸೌಜನ್ಯದಿಂದ ಅವರಿಗೆ ಹಣ ಪಾವತಿಸುವಂತೆ ಕೋರಬೇಕು ಎಂದು ಪ್ರಾಧಿಕಾರ ತಿಳಿಸಿದೆ.
ಒಂದು ವೇಳೆ ಪರಿಸ್ಥಿತಿಯು ವಿಕೋಪಕ್ಕೆ ತಿರುಗಿದರೆ ಸ್ಥಳೀಯ ಪೊಲೀಸರನ್ನು ಸ್ಥಳಕ್ಕೆ ಕರೆಯಿಸಿ ಎಫ್‌ಐಆರ್ ದಾಖಲಿಸಬೇಕು. ಇಡೀ ಘಟನಾವಳಿಯನ್ನು ಇತರೇ ಸಿಬ್ಬಂದಿಯು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಬೇಕು ಎಂದು ಸೂಚಿಸಲಾಗಿದೆ.