ನವದೆಹಲಿ: ಮಹಿಳೆಯರ ವಿರುದ್ಧದ ಅಪರಾಧ ಕೃತ್ಯಗಳನ್ನು ಒಳಗೊಂಡ ಪ್ರಕರಣಗಳ ವಿಚಾರಣೆ ವೇಳೆ ನ್ಯಾಯಾಲಯಗಳು ಸಂವೇದನಾಶೀಲವಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕಾರ್ಯವಿಧಾನ, ಕಾಟಾಚಾರದ ತನಿಖೆ ಅಥವಾ ಸಾಕ್ಷ್ಯಗಳಲ್ಲಿ ಮಹತ್ವವೆನಿಸದ ದೋಷಗಳಿವೆ ಎಂಬ ಕಾರಣಗಳಿಂದಾಗಿ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನ್ಯಾಯಾಲಯಗಳು ಅವಕಾಶ ನೀಡುವುದಿಲ್ಲ ಎಂಬ ನಿರೀಕ್ಷೆ ಇರುತ್ತದೆ.
ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಪ್ರಶಾಂತಕುಮಾರ್ ಮಿಶ್ರಾ ಅವರಿದ್ದ ನ್ಯಾಯಪೀಠವು ಅರ್ಜಿಯೊಂದರ ವಿಚಾರಣೆ ನಂತರ ಶುಕ್ರವಾರ ನೀಡಿದ ತೀರ್ಪಿನಲ್ಲಿ ಈ ಮಾತು ಹೇಳಿದೆ.
ಉತ್ತರಾಖಂಡದ ಬಲವೀರ್ ಸಿಂಗ್ ಎಂಬಾತನ ಪತ್ನಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ವಿಶಪ್ರಾಶನದಿಂದಾಗಿ ಆಕೆ ಮೃತಪಟ್ಟಿದ್ದಳು ಎಂಬುದು ತನಿಖೆಯಿಂದ ಕಂಡು ಬಂದಿದ್ದರಿಂದ ವಿಚಾರಣಾ ನ್ಯಾಯಾಲಯವು ಬಲವೀರ್ ಸಿಂಗ್ ಹಾಗೂ ಆತನ ತಾಯಿಗೆ ಶಿಕ್ಷೆ ವಿಧಿಸಿ ಆದೇಶಿಸಿತ್ತು.
ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದು, ಉತ್ತರಾಖಂಡ ಹೈಕೋರ್ಟ್ 2014ರಲ್ಲಿ ಆದೇಶಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಬಲವೀರ್‌ಸಿಂಗ್ ಹಾಗೂ ಆತನ ತಾಯಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ ನ್ಯಾಯಪೀಠವು ತೀರ್ಪು ನೀಡಿದೆ.