ಇಸ್ರೇಲ್-ಗಾಜಾ ಪರಿಸ್ಥಿತಿ ಕುರಿತು ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಚಿವರ ಮಟ್ಟದ ಸಭೆಯಲ್ಲಿ ಪಾಲ್ಗೊಂಡಿದ್ದ ಇಸ್ರೇಲ್ ವಿದೇಶಾಂಗ ವ್ಯವಹಾರಗಳ ಸಚಿವ ಎಲಿ ಕೊಹೆನ್ ಅವರು ಗುಟೆರಸ್ ಅವರನ್ನು ಮಂಗಳವಾರ ಮಧ್ಯಾಹ್ನ ಭೇಟಿ ಮಾಡಬೇಕಿತ್ತು. ಆದರೆ, ಗುಟೆರಸ್ ಅವರು ಭದ್ರತಾ ಮಂಡಳಿಗೆ ನೀಡಿದ ಈ ಹೇಳಿಕೆಯ ಕಾರಣದಿಂದಾಗಿ, ಇಸ್ರೇಲ್ ಸಚಿವರು ಭೇಟಿಯನ್ನು ರದ್ದು ಮಾಡಿದರು.
ಗುಟೆರಸ್ ಅವರು ಭಯೋತ್ಪಾದನೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಇಸ್ರೇಲ್ ಆರೋಪಿಸಿದೆ. ಭದ್ರತಾ ಮಂಡಳಿಯನ್ನು ಉದ್ದೇಶಿಸಿ ಗುಟೆರಸ್ ಅವರು, 'ಹಮಾಸ್ ನಡೆಸಿರುವ ದಾಳಿಯು ಪ್ರಚೋದನೆ ಇಲ್ಲದೆ ಆಗಿರುವುದಲ್ಲ ಎಂಬುದನ್ನು ಗುರುತಿಸಬೇಕಿರುವುದು ಮಹತ್ವದ್ದು. ಪ್ಯಾಲೆಸ್ಟೀನ್ ಜನರ ಜಾಗವನ್ನು 56 ವರ್ಷಗಳಿಂದ ಉಸಿರುಗಟ್ಟಿಸುವ ರೀತಿಯಲ್ಲಿ ಆಕ್ರಮಿಸಿಕೊಳ್ಳಲಾಗಿದೆ' ಎಂದು ಹೇಳಿದ್ದರು.
'ಬೇರೆಯವರು ಬಂದು ನೆಲೆಸಿ ತಮ್ಮ ನೆಲವನ್ನು ಕ್ರಮೇಣ ಕಬಳಿಸಿದ್ದನ್ನು, ಅರ್ಥವ್ಯವಸ್ಥೆಯು ಹಾಳಾಗಿದ್ದನ್ನು, ತಮ್ಮ ಜನರು ವಲಸೆ ಹೋಗಿದ್ದನ್ನು, ತಮ್ಮ ಮನೆಗಳು ಧ್ವಂಸಗೊಂಡಿದ್ದನ್ನು ಪ್ಯಾಲೆಸ್ಟೀನ್ ಜನ ಕಂಡಿದ್ದಾರೆ. ತಮ್ಮ ಸಂಕಷ್ಟಗಳಿಗೆ ರಾಜಕೀಯ ಪರಿಹಾರ ಸಿಗುತ್ತದೆ ಎಂಬ ಭರವಸೆಯು ಅವರಲ್ಲಿ ಅಳಿಸಿಹೋಗುತ್ತಿದೆ' ಎಂದು ಗುಟೆರಸ್ ಹೇಳಿದ್ದರು. ಈ ಸಭೆಯಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಯಂಟನಿ ಬ್ಲಿಂಕನ್ ಅವರೂ ಇದ್ದರು.
'ಆದರೆ ಪ್ಯಾಲೆಸ್ಟೀನ್ ನಾಗರಿಕ ಕುಂದುಕೊರತೆಗಳು ಹಮಾಸ್ ನಡೆಸಿದ ದಾಳಿಗೆ ಸಮರ್ಥನೆಯಲ್ಲ. ಹಾಗೆಯೇ, ಹಮಾಸ್ ನಡೆಸಿದ ದಾಳಿಯು, ಪ್ಯಾಲೆಸ್ಟೀನ್ ಜನರಿಗೆ ನೀಡುತ್ತಿರುವ ಸಾಮೂಹಿಕ ಶಿಕ್ಷೆಗೆ ಸಮರ್ಥನೆ ಆಗಲಾರದು' ಎಂದು ಕೂಡ ಹೇಳಿದ್ದರು.
'ಮಹಾಪ್ರಧಾನ ಕಾರ್ಯದರ್ಶಿಯವರೇ ನೀವು ನೈತಿಕತೆಯನ್ನು, ನಿಷ್ಪಕ್ಷಪಾತ ಧೋರಣೆಯನ್ನು ಕಳೆದುಕೊಂಡಿದ್ದೀರಿ. ದಾಳಿಯು ಪ್ರಚೋದನೆ ಇಲ್ಲದೆ ಆಗಿದ್ದಲ್ಲ ಎನ್ನುವ ಮೂಲಕ ನೀವು ಭಯೋತ್ಪಾದನೆಯನ್ನು ಸಹಿಸಿಕೊಳ್ಳುತ್ತಿದ್ದೀರಿ. ಅದನ್ನು ಸಹಿಸಿಕೊಳ್ಳುವ ಮೂಲಕ ಸಮರ್ಥನೆಯನ್ನೂ ಮಾಡುತ್ತಿದ್ದೀರಿ' ಎಂದು ವಿಶ್ವಸಂಸ್ಥೆಯಲ್ಲಿನ ಇಸ್ರೇಲ್ ರಾಯಭಾರಿ ಗಿಲಾದ್ ಎರ್ಡನ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.