ಬದಿಯಡ್ಕ: 'ವಿದ್ಯಾರ್ಥಿಗಳ ಜೀವನ ಶಿಸ್ತುಬದ್ಧವಾಗಿ ಸೇವಾ ಮನೋಭಾವದಿಂದ ಕೂಡಿದ್ದರೆ ಉಳಿದ ವಿದ್ಯಾರ್ಥಿಗಳಿಗೆ ಅವರು ಮಾದರಿಯಾಗುತ್ತಾರೆ. ಮುಂದೆ ಆರೋಗ್ಯಪೂರ್ಣ ಸಮಾಜದ ನಿರ್ಮಾಣವಾಗುತ್ತದೆ' ಎಂದು ಕುಂಬ್ದಾಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಹಮೀದ್ ಪೊಸಳಿಗೆ ಅಭಿಪ್ರಾಯಪಟ್ಟರು.
ಅವರು ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಹೈಯರ್ ಸೆಕೆಂಡರೀ ಶಾಲೆಯ ನೂತನ ಎನ್.ಎಸ್.ಎಸ್. ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಶಾಲೆಯ ವ್ಯವಸ್ಥಾಪಕ ನಾರಾಯಣ ಶರ್ಮ ಬಳ್ಳಪದವು ಎನ್.ಎಸ್.ಎಸ್. ಧ್ವಜಾರೋಹಣಗೈದು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ಸೇವಾ ಮನೋಭಾವ ರೂಡಿಸುವಂತೆಯೂ ಎನ್ ಎಸ್ ಎಸ್ ಸಂದೇಶ ವಿದ್ಯಾರ್ಥಿಗಳ ಜೀವನಕ್ಕೆ ಬೆಳಕಾಗಲಿ ಎಂದೂ ಹಾರೈಸಿದರು.
ಎನ್.ಎಸ್.ಎಸ್ ಜಿಲ್ಲಾ ಸಂಯೋಜಕ ಹರಿದಾಸ್ ವಿ. ಸೇವಾ ಯೋಜನೆಯ ಸಂದೇಶ ತಿಳಿಸಿದರು. ಕುಂಬ್ದಾಜೆ ಗ್ರಾಮ ಪಂಚಾಯತಿ ಸದಸ್ಯ ಹರೀಶ್ ಗೋಸಾಡ ಎನ್.ಎಸ್.ಎಸ್. ವಿದ್ಯಾರ್ಥಿಗಳಿಗೆ ಬ್ಯಾಡ್ಜ್ ವಿತರಿಸಿ ಮಾತನಾಡಿದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ ರೈ, ಎಂ.ಪಿ.ಟಿ.ಎ. ಅಧ್ಯಕ್ಷೆ ಜಯಂತಿ, ಮುಖ್ಯೋಪಾಧ್ಯಾಯ ಗಿರೀಶ ಎನ್,ನೌಕರ ಸಂಘದ ಕಾರ್ಯದರ್ಶಿ ಗಣೇಶ ಪಿ.ಎಸ್. ಹಾಗೂ ಎನ್.ಎಸ್.ಎಸ್. ನಾಯಕರಾದ ಶ್ರೀನಿಧಿ ಹಾಗೂ ಶ್ರುತಿ ಮೊದಲಾದವರು ಶುಭ ಹಾರೈಸಿದರು.
ಪ್ರಾಂಶುಪಾಲ ಸತೀಶ ವೈ ಸ್ವಾಗತಿಸಿ, ಎನ್.ಎಸ್.ಎಸ್.ಯೋಜನಾಧಿಕಾರಿ ವಿನೋದ್ ಕುಮಾರ್ ವಂದಿಸಿದರು. ಅಧ್ಯಾಪಕ ಬಾಲಚಂದ್ರನ್ ಕಾರ್ಯಕ್ರಮ ನಿರೂಪಿಸಿದರು.