ರಫಾ : ಹಮಾಸ್ ಬಂಡುಕೋರರು ಇಬ್ಬರು ಅಮೆರಿಕನ್ ಒತ್ತೆಯಾಳುಗಳನ್ನು ಶನಿವಾರ ಬಿಡುಗಡೆ ಮಾಡಿದ್ದಾರೆ. ಇಸ್ರೇಲ್ ಮೇಲೆ ಅಕ್ಟೋಬರ್ 7ರಂದು ದಾಳಿ ಮಾಡಿದ್ದ ಬಂಡುಕೋರರು 200ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ.
ಈಗ ಬಿಡುಗಡೆ ಮಾಡಲಾಗಿರುವ ಒತ್ತೆಯಾಳುಗಳ ಹೆಸರು ಜುಡಿತ್ ಮತ್ತು ನತಾಲಿ ರಾನನ್ (ತಾಯಿ ಮತ್ತು ಮಗಳು). ಈ ಬಿಡುಗಡೆಯು ಸಣ್ಣ ಆಶಾಕಿರಣವೊಂದನ್ನು ಮೂಡಿಸಿದೆ ಎಂದು ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಯ ಅಧ್ಯಕ್ಷೆ ಮಿರ್ಜಾನಾ ಸ್ಪೊಲ್ಜಾರಿಕ್ ಹೇಳಿದ್ದಾರೆ.
ಇಸ್ರೇಲ್‌ಗೆ ಬೆಂಬಲ ಸೂಚಿಸಲು ಹಾಗೂ ಗಾಜಾ ಪಟ್ಟಿಗೆ ಮಾನವೀಯ ನೆಲೆಯಲ್ಲಿ ಅಗತ್ಯ ವಸ್ತುಗಳ ಪೂರೈಕೆ ಆಗುವಂತೆ ನೋಡಿಕೊಳ್ಳುವ ಉದ್ದೇಶದಿಂದ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಇಸ್ರೇಲ್‌ಗೆ ಭೇಟಿ ನೀಡಿದ ನಂತರದಲ್ಲಿ ಈ ಬಿಡುಗಡೆ ಆಗಿದೆ. ಒತ್ತೆಯಾಳುಗಳ ಬಿಡುಗಡೆಯಿಂದಾಗಿ 'ನನಗೆ ಬಹಳ ಸಂತೋಷವಾಗಿದೆ' ಎಂದು ಬೈಡನ್ ಹೇಳಿದ್ದಾರೆ.
ಇಸ್ರೇಲ್ ದೇಶಕ್ಕೆ ಮಾನ್ಯತೆ ನೀಡಲು ಸೌದಿ ಅರೇಬಿಯಾ ಹೊಂದಿದ್ದ ಚಿಂತನೆಯೂ ಹಮಾಸ್ ಬಂಡುಕೋರರು ನಡೆಸಿದ ದಾಳಿಗೆ ಒಂದು ಕಾರಣವಾಗಿರಬಹುದು ಎಂದು ಬೈಡನ್ ಅವರು ಶುಕ್ರವಾರ ಹೇಳಿದ್ದರು. ಬೈಡನ್ ಅವರು ಬಿಡುಗಡೆ ಆಗಿರುವ ಅಮೆರಿಕನ್ ಪ್ರಜೆಗಳ ಜೊತೆ ದೂರವಾಣಿ ಮೂಲಕ ಮಾತನಾಡಿದ್ದಾರೆ.
ಹಮಾಸ್ ಸಂಘಟನೆಯ ರಾಜಕೀಯ ವಿಭಾಗಕ್ಕೆ ಆಶ್ರಯ ನೀಡಿರುವ ಕತಾರ್ ಈ ಇಬ್ಬರ ಬಿಡುಗಡೆಯ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿತ್ತು. ಬಿಡುಗಡೆಗೆ ನೆರವಾಗಿದ್ದಕ್ಕಾಗಿ ಕತಾರ್‌ಗೆ ಬೈಡನ್ ಅವರು ಧನ್ಯವಾದ ಸಮರ್ಪಿಸಿದ್ದಾರೆ.
ಈ ಇಬ್ಬರ ಬಿಡುಗಡೆ ಮಾತುಕತೆಯನ್ನು ಈಜಿಪ್ಟ್ ಮತ್ತು ಕತಾರ್ ನಡೆಸಿವೆ ಎಂದು ಹಮಾಸ್ ಹೇಳಿದೆ. ಅಪಹರಣಕ್ಕೆ ಒಳಗಾಗಿರುವವರಲ್ಲಿ ಬಹುತೇಕರು ಜೀವಂತವಾಗಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.
ಭದ್ರತಾ ಪರಿಸ್ಥಿತಿಯು ಸೂಕ್ತವಾಗಿದ್ದಲ್ಲಿ, ಒತ್ತೆಯಾಳು ಪ್ರಕರಣವನ್ನು ಮುಕ್ತಾಯಗೊಳಿಸಲು ಮಧ್ಯಸ್ಥಿಕೆದಾರರ ಜೊತೆ ಮಾತುಕತೆ ನಡೆದಿದೆ ಎಂದು ಹಮಾಸ್ ಪ್ರಕಟಣೆ ತಿಳಿಸಿದೆ. ಕತಾರ್ ಮತ್ತು ಈಜಿಪ್ಟ್ ನಡೆಸುತ್ತಿರುವ ಮಧ್ಯಸ್ಥಿಕೆ ಪ್ರಯತ್ನಗಳಿಗೆ ತಾನು ಬದ್ಧವಾಗಿ ನಡೆದುಕೊಳ್ಳುವುದಾಗಿಯೂ ಅದು ಹೇಳಿದೆ.
ಫಲ ನೀಡಿದ ಕತಾರ್ ಮಧ್ಯಸ್ಥಿಕೆ
ಪ್ಯಾರಿಸ್: ಪಾಶ್ಚಿಮಾತ್ಯ ದೇಶಗಳು ಹಾಗೂ ಹಮಾಸ್ ಸಂಘಟನೆಯ ಜೊತೆ ಉತ್ತಮ ಸಂಬಂಧ ಹೊಂದಿರುವ ಕತಾರ್ ದೇಶವು ಒತ್ತೆಯಾಳುಗಳನ್ನು ಬಿಡಿಸಿಕೊಂಡು ಬರುವ ಪ್ರಯತ್ನದಲ್ಲಿ ಪ್ರಮುಖ ಮಧ್ಯಸ್ಥಿಕೆದಾರ ಆಗಿ ಕೆಲಸ ಮಾಡುತ್ತಿದೆ. ಇರಾನ್ ಹಿಡಿತದಲ್ಲಿ ಇದ್ದ ಐವರು ಅಮೆರಿಕನ್ನರನ್ನು ಕಳೆದ ತಿಂಗಳು ಬಿಡುಗಡೆ ಮಾಡುವಲ್ಲಿಯೂ ಕತಾರ್ ಪ್ರಮುಖ ಪಾತ್ರ ವಹಿಸಿತ್ತು. ಒತ್ತೆಯಾಳುಗಳನ್ನು ಬಿಡಿಸಿಕೊಂಡು ಬರುವ ಸನ್ನಿವೇಶ ಎದುರಾದಾಗ ಕತಾರ್ ಹೊಂದಿರುವ ಪ್ರಭಾವವನ್ನು ಪಾಶ್ಚಿಮಾತ್ಯ ದೇಶಗಳು ಹೆಚ್ಚೆಚ್ಚು ನೆಚ್ಚಿಕೊಳ್ಳುತ್ತಿವೆ.
'ಎಲ್ಲ ರೀತಿಯಲ್ಲಿಯೂ ಉಪಕಾರಶೀಲ ಮನೋಭಾವ ಹೊಂದಿರುವ ದೇಶ ಕತಾರ್. ಈ ದೇಶಕ್ಕೆ ಹಮಾಸ್ ಬಗ್ಗೆ ಚೆನ್ನಾಗಿ ತಿಳಿದಿದೆ' ಎಂದು ತಜ್ಞರು ಹೇಳಿದ್ದಾರೆ.
ಹಮಾಸ್‌ನ ರಾಜಕೀಯ ವಿಭಾಗದ ಕಚೇರಿಗೆ ಕತಾರ್ ಜಾಗ ಕಲ್ಪಿಸಿದೆ. ಅಲ್ಲದೆ ಕತಾರ್ ಬಗ್ಗೆ ಅಮೆರಿಕಕ್ಕೆ ಬಹಳ ಗೌರವ ಇದೆ. ಅಮೆರಿಕದ ದೊಡ್ಡ ಮಿಲಿಟರಿ ನೆಲೆಯೊಂದು ಕತಾರ್‌ನಲ್ಲಿ ಇದೆ. ಒತ್ತೆಯಾಳುಗಳನ್ನು ಬಿಡುಗಡೆ ಮಾಡಿಸುವ ಪ್ರಕ್ರಿಯೆಯಲ್ಲಿ ಕತಾರ್ ಬಹಳ ವಿಶೇಷವಾದ ಪರಿಣತಿಯನ್ನು ಹೊಂದಿದೆ ಎಂದು ಕೂಡ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒತ್ತೆಯಾಳುಗಳ ಬಿಡುಗಡೆಯ ವಿಚಾರವಾಗಿ ಕತಾರ್ ವಹಿಸಿದ ಪಾತ್ರವನ್ನು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವಲ್ ಮ್ಯಾಕ್ರನ್ ಪ್ರಶಂಸಿಸಿದ್ದಾರೆ.