ಕಾಸರಗೋಡು: ಆಯುಷ್ಮಾನ್ ಮೇಳದ ಕಾಸರಗೋಡು ಟಿ.ಬಿ ಯೂನಿಟ್ ಮಟ್ಟದ ಉದ್ಘಾಟನೆ ಕಾಸರಗೋಡು ಜನರಲ್ ಆಸ್ಪತ್ರೆ ವಠಾರದಲ್ಲಿ ಜರುಗಿತು. ಜನರಲ್ ಆಸ್ಪತ್ರೆ ಸಂಯುಕ್ತಾಶ್ರಯದಲಿನಡೆದ ಆಯುಷ್ಮಾನ್ ಮೇಳವನ್ನು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ ಮಟ್ಟದಲ್ಲಿ ನಡೆಯುವ ಮೇಳಗಳಲ್ಲಿ ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಕ್ಷಯರೋಗದ ನಿರ್ಮೂಲನೆಯಲ್ಲಿ ಜಾಗೃತಿಯ ಹೆಚ್ಚಿನ ಮಹತ್ವವನ್ನು ಅರಿತು ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು. ಜಿಲ್ಲಾಜನರಲ್ ಆಸ್ಪತ್ರೆ ಅಧೀಕ್ಷಕ ಡಾ.ಜಮಾಲ್ ಅಹಮದ್ ಎ ಪ್ರಾಸ್ತಾವಿಕ ಮಾತುಗಳನ್ನಾಡಿ, ಜನರಲ್ ಆಸ್ಪತ್ರೆಗಳ ಮೂಲಕ ಈಗಾಗಲೇ ಸೇವೆಗಳನ್ನು ನೀಡಲಾಗುತ್ತಿದ್ದರೂ ಇಂತಹ ಮೇಳಗಳಿಂದ ಹೆಚ್ಚು ಜನರನ್ನು ತಲುಪುವ ನಿರೀಕ್ಷೆ ಇದೆ ಎಂದು ತಿಳಿಸಿದರು. ನಗರಸಭಾ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಖಾಲಿದ್ ಪಚ್ಚಕ್ಕಾಡ್ ಅಧ್ಯಕ್ಷತೆ ವಹಿಸಿದ್ದರು. ಟಿಬಿ ಘಟಕದ ವೈದ್ಯಾಧಿಕಾರಿ ಡಾ.ನಾರಾಯಣ ಪ್ರದೀಪ ಪಿ, ಡಾ.ವೆಂಕಟಗಿರಿ ಉಪಸ್ಥಿತರಿದ್ದರು.