ಪತ್ತನಂತಿಟ್ಟ: ರಾಜ್ಯದ ದೇವಸ್ವಂ ಮಂಡಳಿಯು ಅದರ ವ್ಯಾಪ್ತಿಯ ಎಲ್ಲಾ ದೇವಸ್ಥಾನಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಿದೆ ಎಂದು ದೇವಸ್ವಂ ಮಂಡಳಿ ಅಧ್ಯಕ್ಷ ಕೆ.ಅನಂತ ಗೋಪನ್ ಘೋಷಿಸಿದ್ದಾರೆ.
ಶಬರಿಮಲೆಯಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಸಹ ಪರಿಚಯಿಸಲಾಗಿದೆ. ದೇವಾಲಯಗಳ ದೈನಂದಿನ ಅಗತ್ಯತೆಗಳಲ್ಲಿ ಸೇರಿಸದ ಚಿನ್ನದ ಗಟ್ಟಿಯನ್ನು ದೇವಸ್ವಂ ಮಂಡಳಿಯು ಆರ್‍ಬಿಐನಲ್ಲಿ ಠೇವಣಿ ಇರಿಸಲಿದೆ.
ಇದೇ ವೇಳೆ ಮಂಡಲ ಪೂಜಾ ಕಾಲಕ್ಕೆ ಸಂಬಂಧಿಸಿದಂತೆ ಶಬರಿಮಲೆಯಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಈ ವರ್ಷ ಕೆಲವು ಹೊಸ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಅನಂತ ಗೋಪನ್ ಮಾಹಿತಿ ನೀಡಿದರು.
ಶಬರಿಮಲೆಯ ಪಾರ್ಕಿಂಗ್ ಬಿಕ್ಕಟ್ಟು ಪರಿಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದರ ಭಾಗವಾಗಿ, ನಿಲಕ್ಕಲ್ ನಲ್ಲಿ ಎಲ್ಲಾ ಪಾರ್ಕಿಂಗ್ ವ್ಯವಸ್ಥೆಯನ್ನು ಉನ್ನತೀಕರಿಸಲಾಗುವುದು. ಪಾರ್ಕಿಂಗ್ ಶುಲ್ಕ ವಸೂಲಿಗೆ ಐಸಿಐಸಿಐ ಬ್ಯಾಂಕ್ ಸಹಯೋಗದಲ್ಲಿ ಫಾಸ್ಟ್ ಟ್ಯಾಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ನವೆಂಬರ್ 10 ರ ಮೊದಲು ಸಿದ್ಧವಾಗಲಿದೆ. ಪಾರ್ಕಿಂಗ್ ಶುಲ್ಕ ಹೆಚ್ಚಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳ ಶುಲ್ಕ ಸಂಗ್ರಹಿಸಲು ನೌಕರರನ್ನು ನೇಮಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಶಬರಿಮಲೆಯಲ್ಲಿ 168 ಹೊಸ ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.