ನವದೆಹಲಿ: ದೇಶದ ಬಹುತೇಕ ವೈದ್ಯಕೀಯ ಕಾಲೇಜುಗಳಲ್ಲಿ ದಾಖಲೆಗಳಲ್ಲಷ್ಟೇ ವೈದ್ಯರ ಕಾರ್ಯಭಾರ ತೋರಿಸಿ, ಆಡಳಿತ ಮಂಡಳಿಗಳು ಸುಳ್ಳು ಹಾಜರಿ ಹಾಕಿರುವ ಸಂಗತಿಯು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ನಡೆಸಿದ ಮೌಲ್ಯಮಾಪನದಲ್ಲಿ ತಿಳಿದು ಬಂದಿದೆ.
ಹಲವು ಕಾಲೇಜುಗಳಲ್ಲಿ ಸ್ಥಾನಿಕ ವೈದ್ಯರು ಕನಿಷ್ಠ ಶೇ 50ರಷ್ಟು ಹಾಜರಾತಿ ಹೊಂದಿರಬೇಕು ಎಂಬ ನಿಯಮವನ್ನೂ ಪಾಲಿಸಿಲ್ಲ.
2022-23ನೇ ಸಾಲಿನಲ್ಲಿ ಕಾಲೇಜುಗಳಿಗೆ ಮಾನ್ಯತೆ ನೀಡಲು ಅಥವಾ ನವೀಕರಣಕ್ಕೆ ಸಂಬಂಧಿಸಿದಂತೆ ದೇಶದ 27 ರಾಜ್ಯಗಳ 246 ವೈದ್ಯಕೀಯ ಕಾಲೇಜುಗಳನ್ನು ಎನ್‌ಎಂಸಿ ಮೌಲ್ಯಮಾಪನಕ್ಕೆ ಒಳಪಡಿಸಿದಾಗ ಈ ವಿಷಯ ಗೊತ್ತಾಗಿದೆ.
'ತುರ್ತು ಚಿಕಿತ್ಸಾ ವಿಭಾಗದಲ್ಲಿ ಅಪಘಾತ ವೈದ್ಯಾಧಿಕಾರಿ ಹೊರತುಪಡಿಸಿದರೆ ಯಾರೊಬ್ಬರೂ ಇರುವುದಿಲ್ಲ. ಅಲ್ಲಿಗೆ ವೈದ್ಯರು ಅಥವಾ ವಿದ್ಯಾರ್ಥಿಗಳು ಭೇಟಿ ನೀಡುವುದಿಲ್ಲ. ಹಾಗಾಗಿ, ಅಲ್ಲಿ ಯಾರೊಂದಿಗೂ ಮಾತುಕತೆಗೆ ಅವಕಾಶವೂ ಇರುವುದಿಲ್ಲ ಎಂಬುದು ಅಧಿಕಾರಿಗಳು ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಬೆಳಕಿಗೆ ಬಂದಿದೆ' ಎಂದು ಆಯೋಗ ಹೇಳಿದೆ.
'ಒಂದು ವೇಳೆ ತುರ್ತು ಚಿಕಿತ್ಸಾ ವಿಭಾಗಕ್ಕೆ ವೈದ್ಯಕೀಯ ವಿದ್ಯಾರ್ಥಿಗಳನ್ನು ನಿಯೋಜಿಸಿದರೆ ಅದು ಅವರ ಪಾಲಿಗೆ ವಿರಾಮದ ಅವಧಿ ಎಂದು ಭಾವಿಸಲಾಗುತ್ತದೆ' ಎಂದು ಎನ್‌ಎಂಸಿಯ ಸ್ನಾತಕೋತ್ತರ ವೈದ್ಯಕೀಯ ಪದವಿ ಶಿಕ್ಷಣ ಮಂಡಳಿ (ಯುಜಿಎಂಇಬಿ) ಹೇಳಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗವು ಜೂನ್ 23ರಂದು ಪ್ರಕಟಿಸಿದ್ದ ಕರಡು ನಿಯಮಾವಳಿ ಅನ್ವಯ ಹೊಸ ವೈದ್ಯಕೀಯ ಕಾಲೇಜುಗಳಿಗೆ ಅನುಮೋದನೆ ನೀಡುವಾಗ 14 ವಿಭಾಗಗಳ ಪಟ್ಟಿಯಲ್ಲಿ ತುರ್ತು ಚಿಕಿತ್ಸಾ ವಿಭಾಗವೂ ಕಡ್ಡಾಯವಾಗಿ ಇರಬೇಕೆಂದು ಹೇಳಲಾಗಿತ್ತು. ಆದರೆ, ಇತ್ತೀಚೆಗೆ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಹೊಸ ಕಾಲೇಜುಗಳು ಈ ವಿಭಾಗವನ್ನು ಹೊಂದಿರಬೇಕು ಎಂಬ ನಿಯಮವನ್ನು ಕೈಬಿಡಲಾಗಿದೆ.
ವೈದ್ಯರ ಸಂಘದ ಕಳವಳ
ಆಯೋಗದ ಈ ನಿರ್ಧಾರಕ್ಕೆ ಭಾರತೀಯ ತುರ್ತು ಚಿಕಿತ್ಸಾ ವೈದ್ಯರ ಸಂಘವು (ಎಇಪಿಐ) ಕಳವಳ ವ್ಯಕ್ತಪಡಿಸಿದೆ. ಹೊಸ ಕಾಲೇಜುಗಳಲ್ಲಿ ಈ ವಿಭಾಗವನ್ನು ಕಡ್ಡಾಯಗೊಳಿಸಬೇಕು ಎಂದು ಆಯೋಗಕ್ಕೆ ಮನವಿ ಮಾಡಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಯುಜಿಎಂಇಬಿ, 'ತುರ್ತು ಚಿಕಿತ್ಸಾ ವಿಭಾಗದಲ್ಲಿನ ದಾಖಲೆಗಳಿಗೂ ಹಾಗೂ ಅಲ್ಲಿರುವ ಚಿತ್ರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ' ಎಂದು ಉತ್ತರಿಸಿದೆ.
ಸೂಚನೆ ಪಾಲನೆಗೆ ನಿರ್ಲಕ್ಷ್ಯ
ವೈದ್ಯಕೀಯ ಕಾಲೇಜುಗಳ ಕಾರ್ಯಕ್ಷಮತೆ ಹಾಗೂ ಸಂಯೋಜಿತ ಆಸ್ಪತ್ರೆಗಳ ಮೌಲ್ಯಮಾಪನಕ್ಕೆ ಯುಜಿಎಂಇಬಿಯು ಕೃತಕ ಬುದ್ಧಿಮತ್ತೆಯ ಮೊರೆ ಹೋಗಿದೆ. ತರಗತಿಗಳಲ್ಲಿ ಬೋಧನೆ ಮತ್ತು ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ವೈದ್ಯರ ಹಾಜರಾತಿಯನ್ನು ಆಧಾರ್ ಆಧಾರಿತ ಬಯೊಮೆಟ್ರಿಕ್ ವ್ಯವಸ್ಥೆಯಡಿ ದಾಖಲಿಸಲಾಗುತ್ತದೆ. 2020ರಲ್ಲಿ ಆಯೋಗವು ತುರ್ತು ಚಿಕಿತ್ಸಾ ವಿಭಾಗಗಳಲ್ಲಿ ವೈದ್ಯಕೀಯ ಸಿಬ್ಬಂದಿ ಹಾಗೂ ಹಿರಿಯ ಸ್ಥಾನಿಕ ವೈದ್ಯರ ಹಾಜರಾತಿಗೆ ಸಂಬಂಧಿಸಿದಂತೆ ಕನಿಷ್ಠ ಅಗತ್ಯ ಮಾನದಂಡ (ಎಂಎಸ್‌ಆರ್) ಪಾಲಿಸುವಂತೆ ಸೂಚಿಸಿತ್ತು. ಇದರನ್ವಯ ಸಿಬ್ಬಂದಿಯ ಶೇ 50ರಷ್ಟು ಹಾಜರಾತಿ ಇರಬೇಕು. ಕೆಲವು ಕಾಲೇಜುಗಳ ದಾಖಲೆಗಳಲ್ಲಿ ಮಾತ್ರವೇ ಈ ಮಾನದಂಡ ಪಾಲನೆಯಾಗಿದೆ. ಅಗತ್ಯವಿರುವ ಅಧ್ಯಾಪಕರನ್ನೂ ನೇಮಿಸಿಲ್ಲ ಎಂದು ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ. 'ವೈದ್ಯಕೀಯ ಸಿಬ್ಬಂದಿಯ ಕೊರತೆ ನೀಗಿಸಲು ಕಾಲೇಜುಗಳಿಗೆ ಸೂಚನೆ ನೀಡಿ ಗಡುವು ಕೂಡ ನೀಡಲಾಗಿತ್ತು. ಆದರೆ ಯಾವುದೇ ಕಾಲೇಜು ಶೇ 50ರಷ್ಟು ಹಾಜರಾತಿ ಕಾಯ್ದುಕೊಂಡಿಲ್ಲ. ಶೂನ್ಯ ಹಾಜರಾತಿಯು ಕೂಡ ದಾಖಲಾಗಿದೆ. ಅದರಲ್ಲೂ 134 ಕಾಲೇಜುಗಳ ತುರ್ತು ಚಿಕಿತ್ಸಾ ವಿಭಾಗಗಳಲ್ಲಿನ ದಾಖಲೆಗಳಲ್ಲಿ ಮಾತ್ರವೇ ವೈದ್ಯಕೀಯ ಸಿಬ್ಬಂದಿ ಇದ್ದಾರೆ' ಎಂದು ಹೇಳಿದೆ.