ರಫಾ : ಇಂಧನ ಪೂರೈಕೆಯು ತಕ್ಷಣ ಆರಂಭವಾಗದೆ ಇದ್ದಲ್ಲಿ ಗಾಜಾ ಪಟ್ಟಿಯ ಆದ್ಯಂತ ತಾನು ನೆರವು ಕಾರ್ಯವನ್ನು ಕಡಿಮೆ ಮಾಡಬೇಕಾಗುತ್ತದೆ ಎಂದು ಪ್ಯಾಲೆಸ್ಟೀನ್ ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಏಜೆನ್ಸಿಯು ಬುಧವಾರ ಎಚ್ಚರಿಕೆ ನೀಡಿದೆ.
ಅಗತ್ಯ ವಸ್ತುಗಳ ಸಂಗ್ರಹವು ಖಾಲಿಯಾಗುತ್ತಿರುವ ಕಾರಣ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಗಾಜಾದ ಆಸ್ಪತ್ರೆಗಳು ಹೆಣಗುತ್ತಿವೆ.
ಗಾಜಾ ಪಟ್ಟಿಯ 23 ಲಕ್ಷ ಜನರ ಪೈಕಿ ಅಂದಾಜು 14 ಲಕ್ಷ ಮಂದಿ, ಗಾಜಾ ಪಟ್ಟಿಯಲ್ಲಿಯೇ ನಿರಾಶ್ರಿತರಾಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಆರು ಲಕ್ಷ ಮಂದಿ ವಿಶ್ವಸಂಸ್ಥೆಯ ಶಿಬಿರಗಳಲ್ಲಿ ನೆರವು ಪಡೆದಿದ್ದಾರೆ.
ಕೆಲವು ಅಗತ್ಯ ವಸ್ತುಗಳನ್ನು ಈಜಿಪ್ಟ್ ಕಡೆಯಿಂದ ಗಾಜಾ ಪಟ್ಟಿಗೆ ಸಾಗಿಸಲು ಇಸ್ರೇಲ್ ಅನುಮತಿ ನೀಡಿದೆ. ಆದರೆ ಇಂಧನ ಪೂರೈಕೆಗೆ ಅವಕಾಶ ಕಲ್ಪಿಸಿಲ್ಲ.
ಗಾಯಾಳುಗಳಲ್ಲಿ ಹಲವರನ್ನು ಸರಳವಾದ ವೈದ್ಯಕೀಯ ನೆರವೂ ಇಲ್ಲದೆ ಆಸ್ಪತ್ರೆಗಳಲ್ಲಿ ನೆಲದ ಮೇಲೆ ಮಲಗಿಸಲಾಗುತ್ತಿದೆ. ಶಸ್ತ್ರಚಿಕಿತ್ಸೆ ಪಡೆಯಬೇಕಾದವರು ದಿನಗಟ್ಟಲೆ ಕಾಯಬೇಕಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಸಿರಿಯಾದ ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್ ಬುಧವಾರ ವಾಯುದಾಳಿ ನಡೆಸಿದೆ. ಇದರಲ್ಲಿ ಎಂಟು ಮಂದಿ ಸೈನಿಕರು ಸತ್ತಿದ್ದಾರೆ ಎಂದು ಸಿರಿಯಾದ ಸನಾ ಸುದ್ದಿಸಂಸ್ಥೆ ಹೇಳಿದೆ.
ಲೆಬನಾನ್‌ನ ಹಿಜ್ಬುಲ್ಲಾ ಸಂಘಟನೆಯ ನಾಯಕ ಹಸನ್ ನಸ್ರಲ್ಲಾ, ಹಮಾಸ್ ಮತ್ತು ಪ್ಯಾಲೆಸ್ಟೀನಿಯನ್ ಇಸ್ಲಾಮಿಕ್ ಜಿಹಾದ್ ಸಂಘಟನೆಯ ಮುಖಂಡರು ಬುಧವಾರ ಭೇಟಿ ಮಾಡಿದ್ದಾರೆ ಎಂದು ವರದಿಯಾಗಿದೆ. ಯುದ್ಧ ಆರಂಭವಾದ ನಂತರದಲ್ಲಿ ಈ ಮೂರು ಸಂಘಟನೆಗಳ ಮುಖಂಡರು ಭೇಟಿಯಾದ ಬಗ್ಗೆ ವರದಿಯಾಗಿರುವುದು ಇದೇ ಮೊದಲು. ಈ ಮೂರು ಸಂಘಟನೆಗಳ ನಡುವೆ ಸಮನ್ವಯ ಇದ್ದಿರಬಹುದು ಎಂಬುದನ್ನು ಭೇಟಿಯು ಸೂಚಿಸುತ್ತಿದೆ.
ಈ ಯುದ್ಧದಲ್ಲಿ ಇದುವರೆಗೆ 6,500ಕ್ಕೂ ಹೆಚ್ಚು ಪ್ಯಾಲೆಸ್ಟೀನ್ ನಾಗರಿಕರು ಬಲಿಯಾಗಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ಹೇಳಿದೆ.
ಒತ್ತೆಯಾಳುಗಳ ಬಿಡುಗಡೆಗೆ ಮಧ್ಯಸ್ಥಿಕೆ ಕೆಲಸ ಮಾಡುತ್ತಿರುವ ಕತಾರ್, ಮಾತುಕತೆಗಳಲ್ಲಿ ಶೀಘ್ರದಲ್ಲಿಯೇ ಒಂದಿಷ್ಟು ಫಲ ಸಿಗಬಹುದು ಎಂಬ ಆಶಾಭಾವನೆ ವ್ಯಕ್ತಪಡಿಸಿದೆ. ಕತಾರ್ ನೆರವಿಗೆ ಇಸ್ರೇಲ್ ಮೆಚ್ಚುಗೆಯ ಮಾತು ಹೇಳಿದೆ.