ಡೆಹ್ರಾಡೂನ್: ಅನಧಿಕೃತ ಮದರಸಾಗಳಲ್ಲಿ ವಿದ್ಯಾರ್ಥಿಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಆದೇಶಿಸಿದ್ದಾರೆ.
ಈ ಬಗ್ಗೆ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಗೆ ಸೂಚನೆ ನೀಡಿರುವ ಅವರು, ಎಲ್ಲ ಮದರಸಗಳಲ್ಲಿ ಪರಿಶೀಲನೆ ನಡೆಸಬೇಕು.
ಯಾವುದಾದರೂ ಅನೈತಿಕ ಚಟುವಟಿಕೆ ನಡೆಯುವುದು ಕಂಡುಬಂದತೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳ ಆದೇಶ ಬೆನ್ನಲ್ಲೇ, ಮದರಸಾಗಳನ್ನು ಪರಿಶೀಲನೆ ನಡೆಸಬೇಕು ಎಂದು ಗೃಹ ಸಚಿವಾಲಯವು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನೈನಿತಾಲ್‌ನ ಜಿಯೋಲಿಕೋಟ್ ಸಮೀಪದ ವೀರ್‌ಭಟ್ಟಿ ಎಂಬಲ್ಲಿರುವ ಮದರಸಾವೊಂದರಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ ಹಾಗೂ ದೈಹಿಕ ಹಲ್ಲೆ ನಡೆಸಲಾಗಿದೆ ಎಂದು ವಿದ್ಯಾರ್ಥಿಯೊಬ್ಬರ ತಂದೆ ನೀಡಿದ ದೂರಿನ ಅನ್ವಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಶುದ್ಧ ಆಹಾರ ಹಾಗೂ ನೀರು ಸಿಗದೇ ಇರುವುದರಿಂದ ವಿದ್ಯಾರ್ಥಿಗಳ ಆರೋಗ್ಯ ಹದಗೆಟ್ಟಿದೆ ಎಂದು ಪೊಲೀಸರು ಹೇಳಿದ್ದರು. ಅಲ್ಲದೆ ನೋಂದಣಿ ಇಲ್ಲದೆ ಮದರಸಾಗಳು ಕಾರ್ಯಾಚರಿಸುತ್ತಿವೆ ಎಂದು ತಿಳಿಸಿದ್ದರು.
ಘಟನೆ ಸಂಬಂಧ ಮದರಸ ಮೌಲ್ವಿ ಮೊಹಮ್ಮದ್ ಹಾರೂನ್ ಹಾಗೂ ಅವರ ಮಗ ಇಬ್ರಾಹಿಂ ವಿರುದ್ಧ ಪೋಕ್ಸೊ ಹಾಗೂ ಬಾಲನ್ಯಾಯ ಕಾಯಿದೆಯಡಿ ದೂರು ದಾಖಲಿಸಲಾಗಿದೆ ಎಂದು ತಲ್ಲಿತಾಲ್ ಪೊಲೀಸ್ ಠಾಣೆ ಉಸ್ತುವಾರಿ ಹೋಹ್‌ತಾಶ್ ಸಿಂಗ್ ಹೇಳಿದ್ದಾರೆ.
ಪ್ರಕರಣ ತನಿಖೆ ಹಂತದಲ್ಲಿದ್ದು, ತನಿಖೆ ಬಳಿಕ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.