ಗ್ಯಾಂಗ್ಟಕ್ :ದಕ್ಷಿಣ ಲೋನಕ್ ಸರೋವರದಲ್ಲಿ ಹಿಮನದಿ ಸ್ಫೋಟದ ಅಪಾಯದ ಬಗ್ಗೆ 10 ವರ್ಷಗಳಲ್ಲಿ ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆದರೆ ಆ ಎಚ್ಚರಿಕೆಗಳನ್ನು ಕಡೆಗಣಿಸಿದ ಕಾರಣಕ್ಕೇ ಇಂದಿನ ದುರಂತ ಸಂಭವಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಲೋನಕ್ ಸಮುದ್ರಮಟ್ಟದಿಂದ 17,100 ಅಡಿ ಎತ್ತರದಲ್ಲಿ ಇರುವ ಒಂದು ಸರೋವರ.
ಈ ಸರೋವರದ ಧಾರಣಾ ಸಾಮರ್ಥ್ಯದ ಬಗ್ಗೆ 2011ರಲ್ಲಿ ಅಧ್ಯಯನ ನಡೆಸಿದ್ದ ಕೇಂದ್ರ ಜಲ ಆಯೋಗವು, 'ಈ ಅಣೆಕಟ್ಟೆ ದುರ್ಬಲವಾಗಿರುವ ಕಾರಣ ಅದು ಯಾವಾಗ ಬೇಕಾದರೂ ಒಡೆಯಬಹುದು' ಎಂದು ಎಚ್ಚರಿಕೆ ನೀಡಿತ್ತು. 2013ರಲ್ಲಿ ಈ ಸಂಬಂಧ ವರದಿಯನ್ನು ನೀಡಿತ್ತು. ಜತೆಗೆ ಅಗತ್ಯ ಕ್ರಮಗಳನ್ನೂ ಸೂಚಿಸಿತ್ತು. ಆದರೆ ಅದನ್ನು ಕಡೆಗಣಿಸಲಾಗಿತ್ತು. 2015ರಲ್ಲಿ ಜಲ ಆಯೋಗವು ಮತ್ತೆ ಇಂತಹ ಎಚ್ಚರಿಕೆಯನ್ನು ನೀಡಿತ್ತು. ಆಗಲೂ ಯಾವುದೇ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ದಕ್ಷಿಣ ಲೋನಕ್ ಸರೋವರವೂ ಸೇರಿದಂತೆ 15ಕ್ಕೂ ಹೆಚ್ಚು ಸರೋವರಗಳಲ್ಲಿ ಇಂತಹ ಸ್ಥಿತಿ ಇದೆ ಎಂದು 2022ರಲ್ಲಿ ಮತ್ತೊಮ್ಮೆ ಇಂತಹ ಎಚ್ಚರಿಕೆಯನ್ನು ನೀಡಲಾಗಿತ್ತು. ಲೋನಕ್ ಸರೋವರದ ದಂಡೆ ಯಾವಾಗ ಬೇಕಾದರೂ ಒಡೆಯಬಹುದು ಎಂದು ಎಚ್ಚರಿಕೆ ನೀಡಲಾಗಿತ್ತು. ಆನಂತರ 'ದಂಡೆ ತುರ್ತು ಎಚ್ಚರಿಕೆ ವ್ಯವಸ್ಥೆ' ಅಳವಡಿಕೆಗೆ ಕೇಂದ್ರ ಸರ್ಕಾರವು ಆದೇಶಿಸಿತ್ತು. ಆ ವ್ಯವಸ್ಥೆಯ ಅಳವಡಿಕೆ ಕಾರ್ಯ ಪ್ರಗತಿಯಲ್ಲಿತ್ತು. ಇದರ ಭಾಗವಾಗಿ ಮೊದಲ ಹಂತದಲ್ಲಿ ಸರೋವರ ದಂಡೆಯಲ್ಲಿ ಸಂವೇದಕಗಳನ್ನು ಅಳವಡಿಸಲಾಗಿತ್ತು. ಎರಡನೇ ಹಂತದಲ್ಲಿ ಸೈರನ್ ಮತ್ತು ಎಚ್ಚರಿಕೆ ರವಾನೆ ವ್ಯವಸ್ಥೆಯನ್ನು ಅಳವಡಿಸಬೇಕಿತ್ತು. ಸರ್ಕಾರವು ಹಣ ಬಿಡುಗಡೆ ಮಾಡದೇ ಇರುವ ಕಾರಣಕ್ಕೆ ಎರಡನೇ ಹಂತದ ವ್ಯವಸ್ಥೆ ಕಾಮಗಾರಿ ಸ್ಥಗಿತವಾಗಿತ್ತು.
ಈ ವ್ಯವಸ್ಥೆ ಅಳವಡಿಸಿದ್ದಿದ್ದರೆ, ಸರೋವರದ ದಂಡೆ ಒಡೆದ ಕೂಡಲೇ ಸೈರನ್ ಕೂಗುತ್ತಿತ್ತು ಮತ್ತು ಎಚ್ಚರಿಕೆ ಸಂದೇಶ ರವಾನೆಯಾಗುತ್ತಿತ್ತು. ದಂಡೆ ಒಡೆದು ನೀರು ನುಗ್ಗಿದರೂ, ಹತ್ತಿರದ ಜನವಸತಿ ಪ್ರದೇಶಕ್ಕೆ ನೀರು ನುಗ್ಗಲು 90 ನಿಮಿಷ ಬೇಕಾಗಿತ್ತು. ತೀಸ್ತಾ ನದಿಗೆ ಅಡ್ಡವಾಗಿ ಕಟ್ಟಿರುವ ಚುಂಗ್‌ತಾಂಗ್ ಅಣೆಕಟ್ಟೆಗೆ ಈ ನೀರು ತಲುಪಲು ಎರಡು ತಾಸಿನ ಕಾಲಾವಕಾಶ ಇರುತ್ತಿತ್ತು. ಎಚ್ಚರಿಕೆ ರವಾನೆ ವ್ಯವಸ್ಥೆ ಇಲ್ಲದೇ ಇರುವ ಕಾರಣಕ್ಕೆ ಜನರನ್ನು ತೆರವು ಮಾಡಲು ಸಾಧ್ಯವಾಗಿಲ್ಲ. ಹೀಗಾಗಿಯೇ ಹೆಚ್ಚು ಪ್ರಾಣಹಾನಿ ಸಂಭವಿಸಿದೆ ಎಂದು ಸಿಕ್ಕಿಂ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಚುಂಗ್‌ತಾಂಗ್ ಅಣೆಕಟ್ಟೆಯ ಗೇಟುಗಳನ್ನು ತೆರೆಯಲೂ ಅವಕಾಶವಿತ್ತು. ಆಗ ಅಣೆಕಟ್ಟೆ ಒಡೆದು ದಿಢೀರ್ ಪ್ರವಾಹ ಉಂಟಾಗುವ ಅಪಾಯ ಇರುತ್ತಿರಲಿಲ್ಲ. ಅಣೆಕಟ್ಟೆಯ ಗೇಟುಗಳನ್ನು ತೆಗೆಯಲು ಅವಕಾಶವಿದ್ದರೂ, ಏಕೆ ತೆಗೆಯಲಿಲ್ಲ ಎಂಬುದು ಗೊತ್ತಾಗುತ್ತಿಲ್ಲ ಎಂದು ಸಿಕ್ಕಿ ಸರ್ಕಾರದ ಅಧಿಕಾರಿಗಳು ಆಘಾತ ವ್ಯಕ್ತಪಡಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.