ಕುಂಬಳೆ: ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತಪದ್ಮನಾಭ ದೇವಸ್ಥಾನದ ದೇವರ ಮೊಸಳೆ 'ಬಬಿಯಾ'ಸಾವಿಗೀಡಾಗಿ ವರ್ಷ ತುಂಬಿದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಕರ್ಯಕ್ರಮ ಜರುಗಿತು. ಬಬಿಯಾ ಅಂತಿಮ ಸಂಸ್ಕಾರ ನಡೆಸಿದ ಸ್ಥಳದಲ್ಲಿ ಪುಷ್ಪಾರ್ಚನೆ ನಡೆಸಿದ ನಂತರ ದೇವಸ್ಥಾನದ ಸಭಾಂಗಣದಲ್ಲಿ ಸಂಸ್ಮರಣಾ ಸಮಾರಂಭ ನಡೆಯಿತು.
ದೇವಸ್ಥಾನದಲ್ಲಿ ವಿವಿಧ ತ0ಡಗಳಿಂದ ಭಜನೆ, ಶ್ರೀದೇವರಿಗೆ ವಿಶೇಷ ಬಲಿವಾಡುಕೂಟ, ವಿಶೇಷ ಪೂಜೆ ನಡೆಯಿತು.
ಹಿರಿಯ ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ ಸಮಾರಂಭ ಉದ್ಘಾಟಿಸಿ ಮಾತನಾಡಿ, ದೇವಸ್ಥಾನದ ಪ್ರತ್ಯಕ್ಷ ದೇವರಾಗಿದ್ದ ಬಬಿಯಾ ಹೆಸರಿನ ಮೊಸಳೆಯಿಂದ ದೇವಸ್ಥಾನದ ಖ್ಯಾತಿ ಉತ್ತುಂಗಕ್ಕೇರುವಂತಾಗಿದೆ. ಬಬಿಯಾ ಮತ್ತು ಅನಂತಪುರ ಸರೋವರ ದೇಗುಲದ ನಡುವಿನ ಸಂಬಂಧ ಅವಿನಾಭಾವದಿಂದ ಕೂಡಿತ್ತು ಎಂದು ತಿಳಿಸಿದರು. ದೆವಸ್ಥಾನದ ಜೀರ್ಣೋದ್ಧಾರ-ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ನಾಧವ ಕಾರಂತ ಅದ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ದೇವಸ್ಥಾನದ ಅಭಿವೃದ್ಧಿ ಯೋಜನೆ ನಿಟ್ಟಿನಲ್ಲಿ ಹೊರತರಲಾದ ವಿನಂತಿಪತ್ರವನ್ನು ಬಿಡುಗಡೆಗೊಳಿಸಲಾಯಿತು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರಮಾನಾಥ ಶೆಟ್ಟಿ ಸ್ವಾಗತಿಸಿದರು. ಎಂ.ವಿ ಮಹಾಲಿಂಗೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು. ಸತ್ಯಶಂಕರ ಅನಂತಪುರ ವಂದಿಸಿದರು.