ನವದೆಹಲಿ: ಇಸ್ರೇಲ್-ಹಮಾಸ್ ಸಂಘರ್ಷಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಮಹಾಸಭೆಯ ನಿರ್ಣಯದಿಂದ ಭಾರತ ಹೊರಗುಳಿದಿರುವುದಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಶನಿವಾರ ಆಘಾತ ವ್ಯಕ್ತಪಡಿಸಿದ್ದಾರೆ.
ಗಾಜಾದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಮಾನವೀಯ ನೆಲೆಯಲ್ಲಿ ಕದನ ವಿರಾಮ ಘೋಷಿಸಬೇಕೆಂಬ ಉದ್ದೇಶದಿಂದ, 'ನಾಗರಿಕರ ರಕ್ಷಣೆ, ಕಾನೂನು ಮತ್ತು ಮಾನವೀಯ ಹೊಣೆಗಾರಿಕೆಯನ್ನು ಎತ್ತಿಹಿಡಿಯುವುದು' ಎಂಬ ಘೋಷಣೆಯನ್ನು ಜೋರ್ಡಾನ್ ಮಂಡಿಸಿತು.
ನಿರ್ಣಯದ ಪರವಾಗಿ 121 ಸದಸ್ಯ ರಾಷ್ಟ್ರಗಳು ಹಾಗೂ ವಿರುದ್ಧವಾಗಿ 14 ರಾಷ್ಟ್ರಗಳು ಮತ ಚಲಾಯಿಸಿವೆ. ಭಾರತ ಸೇರಿದಂತೆ ಒಟ್ಟು 44 ದೇಶಗಳು ನಿರ್ಣಯದಿಂದ ಹೊರಗುಳಿದಿವೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕಾ, 'ಒಂದು ಕಣ್ಣಿಗೆ, ಒಂದು ಕಣ್ಣು ಎಂದು ನಿಂತರೆ ಇಡೀ ಜಗತ್ತು ಕುರುಡಾಗುತ್ತದೆ' ಎಂದು ಮಹಾತ್ಮ ಗಾಂಧಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಕಿಡಿಕಾರಿದ್ದಾರೆ.
'ಗಾಜಾದಲ್ಲಿ ಕದನ ವಿರಾಮ ಘೋಷಣೆಗಾಗಿ ಕೈಗೊಂಡ ನಿರ್ಣಯದಿಂದ ನಮ್ಮ ದೇಶ ಹೊರಗುಳಿದಿರುವುದು ಆಘಾತ ಮತ್ತು ಅಪಮಾನವನ್ನುಂಟುಮಾಡಿದೆ. ನಮ್ಮ ದೇಶವು ಅಹಿಂಸೆ ಮತ್ತು ಸತ್ಯ ಸಿದ್ಧಾಂತದ ಮೇಲೆ ರಚನೆಯಾಗಿದೆ. ಅವುಗಳಿಗಾಗಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಬಲಿದಾನ ಮಾಡಿದ್ದಾರೆ. ಸಂವಿಧಾನಾತ್ಮಕವಾದ ಆ ಸಿದ್ಧಾಂತಗಳು ನಮ್ಮ ರಾಷ್ಟ್ರೀಯತೆಯನ್ನು ಸಾರುತ್ತವೆ' ಎಂದಿದ್ದಾರೆ.
'ಸಾವಿರಾರು ಪುರುಷರು, ಮಹಿಳೆಯರು ಹಾಗೂ ಮಕ್ಕಳು ನಾಶವಾಗುವುದನ್ನು ಮೂಖರಾಗಿ ನೋಡುತ್ತಾ ನಿಲ್ಲುವುದು ಎಂದರೆ ಇತಿಹಾಸದುದ್ದಕ್ಕೂ ನಮ್ಮ ದೇಶ ಅನುಸರಿಸಿಕೊಂಡು ಬಂದ ನಿಲುವುಗಳಿಗೆ ವ್ಯತಿರೀಕ್ತವಾದದ್ದಾಗಿದೆ. ಲಕ್ಷಾಂತರ ಜನರು ಆಹಾರ, ನೀರು, ವೈದ್ಯಕೀಯ ಸರಬರಾಜು, ಸಂವಹನ ಹಾಗೂ ವಿದ್ಯುತ್ ಬಳಕೆಯಿಂದ ವಂಚಿತರಾಗುವುದನ್ನು ನೋಡುತ್ತಲೇ ನಿರ್ಣಯ ತೆಗೆದುಕೊಳ್ಳುವುದನ್ನು ನಿರಾಕರಿಸುವುದು ಮಾನವೀಯತೆಯ ಲಕ್ಷಣವಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.