ಕಣ್ಣೂರು: ರಾಜ್ಯ ಸರ್ಕಾರ ತಮ್ಮನ್ನು ನಿರ್ಲಕ್ಷಿಸುತ್ತಿದೆ ಎಂದು ಮಲಬಾರ್ ದೇವಸ್ವಂ ನೌಕರರು ಹೇಳಿದ್ದಾರೆ. ದೇವಸ್ಥಾನದ ನೌಕರರು ಸೇವೆ ಮತ್ತು ವೇತನದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ದೂರಿರುವರು.
ಕೇರಳ ರಾಜ್ಯೋದಯ ದಿನವನ್ನು ಕರಾಳ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ನೌಕರರು ಮಾಹಿತಿ ನೀಡಿದರು.
ಹೈಕೋರ್ಟ್ ಮಧ್ಯಸ್ಥಿಕೆಯಿಂದ ಮಲಬಾರ್ ದೇವಸ್ವಂ ಬೋರ್ಡ್ ರಚನೆಯಾದರೂ, ದೇವಸ್ವಂ ಮಂಡಳಿ ಇಂದಿಗೂ ಹಳೆಯ ಮದ್ರಾಸ್ ಕಾಯಿದೆಯನ್ನೇ ಅನುಸರಿಸುತ್ತಿದೆ. ಸಂಯುಕ್ತ ಕೇರಳ ರಚನೆಯಾಗಿ 67 ವರ್ಷ ಕಳೆದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.ಆದ್ದರಿಂದ ನೌಕರರ ನೇಮಕಾತಿ ಮತ್ತು ವೇತನದ ವಿಷಯದಲ್ಲಿ ಇತರೆ ದೇವಸ್ವಂ ಮಂಡಳಿಗಳಿಗೆ ಹೋಲಿಸಿದರೆ ಪರಿಸ್ಥಿತಿ ಶೋಚನೀಯವಾಗಿದೆ. 14 ವರ್ಷಗಳ ಹಿಂದೆ ಘೋಷಿಸಿದ್ದ ಸುಧಾರಣೆಗಳನ್ನು ಸಹ ಸರ್ಕಾರ ಇದುವರೆಗೆ ಜಾರಿಗೆ ತಂದಿಲ್ಲ ಎಂದು ನೌಕರರು ಹೇಳಿದರು.
ಆರು ತಿಂಗಳಿಗೂ ಹೆಚ್ಚು ಕಾಲ ದೇವಸ್ವಂ ಮಂಡಳಿ ಕೇಂದ್ರ ಕಚೇರಿಯಲ್ಲಿ ಜಂಟಿ ಮುಷ್ಕರ ಸಮಿತಿ ನೇತೃತ್ವದಲ್ಲಿ ದೇವಸ್ಥಾನದ ನೌಕರರು ಮುಷ್ಕರ ನಡೆಸಿದ್ದು, ಸರಕಾರ ಇದನ್ನು ಕಂಡೂ ಕಾಣದಂತೆ ನಟಿಸುತ್ತಿದೆ. ಮಲಬಾರ್ ದೇವಸ್ವಂ ಮಂಡಳಿ ಪ್ರಧಾನ ಕಚೇರಿ ಹಾಗೂ ಸಹಾಯಕ ಆಯುಕ್ತರ ಕಚೇರಿಯಲ್ಲಿ ಕೇರಳ ರಾಜ್ಯೋದಯ ದಿನದಂದು ಕಪ್ಪು ಬಾವುಟ ಹಾರಿಸಿ ಪ್ರತಿಭಟನೆ ನಡೆಸುವುದಾಗಿ ನೌಕರರು ತಿಳಿಸಿದ್ದಾರೆ.