ಕಾಸರಗೋಡು: ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆ ಅನಾವರಣಗೊಳ್ಳಲು ಪ್ರೋತ್ಸಾಹ ಅಗತ್ಯ. ಭವಿಷ್ಯದ ಭರವಸೆಯಾಗಿರುವ ಮಕ್ಕಳನ್ನು ಗುರುತಿಸಿ ಸಮ್ಮಾನಿಸುವ ಹಾಗು ಅವಕಾಶ ನೀಡುವ ಮೂಲಕ ಸಾಧನೆಯ ಶಿಖರವನ್ನೇರಲು ಸಾಧ್ಯವಾಗುತ್ತದೆ. ನವರಾತ್ರಿ ಮಹೋತ್ಸವದ ಸಂದರ್ಭದಲ್ಲಿ ಮಕ್ಕಳನ್ನು ಗುರುತಿಸಿ ಅವರಿಗೆ ಭರವಸೆಯ ಬೆಳಕು ಪ್ರಶಸ್ತಿ ನೀಡುವ ಮೂಲಕ ಕನ್ನಡ ಭವನ ಉತ್ತಮ ಕೆಲಸ ಮಾಡಿದೆ ಎಂದು ಎಡನೀರು ಮಠಾಧೀಶ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.
ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಾಂಸ್ಕøತಿಕ ಘಟಕ ಮತ್ತು ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಆಶ್ರಯದಲ್ಲಿ ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ದುರ್ಗಾಂಬಾ ವೇದಿಕೆಯಲ್ಲಿ ಆಯೋಜಿಸಿದ ಕಾಸರಗೋಡು ದಸರಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ 37 ಮಕ್ಕಳಿಗೆ ಭರವಸೆಯ ಬೆಳಕು ಪ್ರಶಸ್ತಿ ನೀಡಿ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದ.ಕ. ಸಾಹಿತ್ಯ ಪರಿಷತ್‍ನ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸಾಹಿತಿ ಜಯಾನಂದ ಪೆರಾಜೆ, ವ್ಯಂಗ್ಯಚಿತ್ರ ಕಲಾವಿದ ವೆಂಕಟ್ ಭಟ್ ಎಡನೀರು, ಸಹಾಯಕ ಪ್ರಾಧ್ಯಾಪಕಿ ಡಾ|ಶೈಲ ಕೆ.ಎನ್, ಉಪನ್ಯಾಸಕಿ ಡಾ.ಅನುರಾಧಾ ಕುರುಂಜಿ, ಸಾಹಿತಿ ಶಾಂತಾ ಪುತ್ತೂರು, ಕವಿ ಟಿ.ತ್ಯಾಗರಾಜ್ ಮೈಸೂರು, ಸಾಹಿತಿ ವಿರಾಜ್ ಅಡೂರು, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್, ಪತ್ರಕರ್ತ ವೀಜಿ ಕಾಸರಗೋಡು ಶುಭಹಾರೈಸಿದರು. ಸಾಹಿತಿ ರೇಖಾ ಸುದೇಶ್, ಸಂಘಟಕ ಎ.ಆರ್.ಸುಬ್ಬಯ್ಯಕಟ್ಟೆ, ಪತ್ರಕರ್ತ ಜಗನ್ನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಸ್ಥಾಪಕ ವಾಮನ ರಾವ್ ಬೇಕಲ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪತ್ರಕರ್ತ, ಲೇಖಕ ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು. ಗ್ರಂಥಾಲಯದ ಕಾರ್ಯದರ್ಶಿ ವಸಂತ ಕೆರೆಮನೆ ವಂದಿಸಿದರು.