ಲಖಿಂಪುರ ಖೀರಿ: ಪ್ಯಾಲೆಸ್ಟೀನ್ ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೆಬಲ್ ಸುಹೈಲ್ ಅನ್ಸಾರಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಸುಹೈಲ್ ಅವರು ಪ್ಯಾಲೆಸ್ಟೀನ್‌ಗೆ ದೇಣಿಗೆ ನೀಡುವಂತೆ ಕೋರಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.
ಇದು ಎರಡು-ಮೂರು ದಿನಗಳಿಂದ ಭಾರಿ ಹಂಚಿಕೆಯಾಗುತ್ತಿತ್ತು. ಇದನ್ನು ಅರಿತ ಪೊಲೀಸ್ ವರಿಷ್ಠಾಧಿಕಾರಿ ಅವರು ಪ್ರಕರಣದ ತನಿಖೆಗೆ ಸೂಚಿಸಿದ್ದಾರೆ. ಜೊತೆಗೆ ಸುಹೈಲ್ ಅವರನ್ನು ಸೇವೆಯಿಂದ ಅಮಾನತು ಮಾಡಿದ್ದಾರೆ. ಸುಹೈಲ್ ತಪ್ಪಿತಸ್ಥರೆಂದು ಸಾಬೀತಾದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದೂ ಹೇಳಿದ್ದಾರೆ ಎಂದು ಸರ್ಕಲ್ ಆಫೀಸರ್ ಸಂದೀಪ್ ಸಿಂಗ್ ತಿಳಿಸಿದ್ದಾರೆ.
ಅಕ್ಟೋಬರ್ 7ರಂದು ಹಮಾಸ್ ಬಂಡುಕೋರರು ದಕ್ಷಿಣ ಇಸ್ರೇಲ್ ಮೇಲೆ ದಾಳಿ ನಡೆಸಿ ನೂರಾರು ನಾಗರಿಕರನ್ನು ಕೊಂದಿದ್ದರು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಸಹ ದಾಳಿ ನಡೆಸುತ್ತಿದೆ. ಪರಿಣಾಮವಾಗಿ ಇಸ್ರೇಲ್ ಮತ್ತು ಗಾಜಾ ಪಟ್ಟಿಯಲ್ಲಿ ಸಾವಿರಾರು ಮಂದಿ ಮೃತಪಟ್ಟಿದ್ದಾರೆ.