ಕೊಚ್ಚಿ: ಗಾಜಾಪಟ್ಟಿ ಮೇಲಿನ ಇಸ್ರೇಲ್ ದಾಳಿ ಖಂಡಿಸಿ ಕೇರಳದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಮಾಸ್ ಉಗ್ರ ಸಂಘಟನೆಯ ನಾಯಕ ವರ್ಚುವಲ್ ಆಗಿ ಪಾಲ್ಗೊಂಡಿದ್ದರು ಎಂದು ಕೇರಳ ಬಿಜೆಪಿ ಗಂಭೀರ ಆರೋಪ ಮಾಡಿದೆ.
ಕೇರಳದ ಮಲಪ್ಪುರಂನಲ್ಲಿ ಶುಕ್ರವಾರ ಪ್ಯಾಲೆಸ್ಟೈನ್ ಪರವಾಗಿ ಜಮಾತೆ ಇಸ್ಲಾಮಿಯ ಯುವ ಘಟಕವಾದ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ (Solidarity Youth Movement)ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಮಾಸ್ ನಾಯಕ ಖಲೀದ್ ಮಶಾಲ್ (Khaled Mashal) ವರ್ಚುವಲ್ ಮೂಲಕ ಪಾಲ್ಗೊಂಡಿದ್ದ ಬಗ್ಗೆ ಕೇರಳ ಬಿಜೆಪಿ ಘಟಕ ಆಘಾತ ವ್ಯಕ್ತಪಡಿಸಿದೆ.
ಉಗ್ರಗಾಮಿ ಸಂಘಟನೆಯೊಂದಿಗೆ ಇಸ್ರೇಲ್ ನಡೆಸುತ್ತಿರುವ ಯುದ್ಧದ ವಿರುದ್ಧ ರಾಜ್ಯದಲ್ಲಿ ಇಸ್ಲಾಮಿಸ್ಟ್ ಗುಂಪು ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದರಲ್ಲಿ ಹಮಾಸ್ (Hamas)ನ ಖಲೀದ್ ಮಶಾಲ್ ವರ್ಚುವಲ್ ಆಗಿ ಭಾಗವಹಿಸಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಶನಿವಾರ ಆರೋಪಿಸಿದ್ದಾರೆ.
ಮಶಾಲ್ ಭಾಗವಹಿಸಿದ್ದ ಪೋಸ್ಟರ್ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ''ಸಾಂಪ್ರದಾಯಿಕವಾಗಿ ಜಾತ್ಯತೀತ ನೆಲೆಯಾದ ಕೇರಳದಲ್ಲಿ ಪರಿಸ್ಥಿತಿ ಈ ಮಟ್ಟಕ್ಕೆ ತಲುಪಿದೆ'' ಎಂದು ಆಘಾತ ಹೊರಹಾಕಿದ್ದಾರೆ.
ಅಲ್ಲದೆ ''ಹಮಾಸ್‌ನ ಭಯೋತ್ಪಾದಕ ನಾಯಕ ಸ್ವತಃ ರಾಜ್ಯದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಇದು ವರ್ಚುವಲ್ ಭಾಗವಹಿಸುವಿಕೆಯಾಗಿದೆ. ಏಕೆಂದರೆ, ಅವರಿಗೆ ವೀಸಾ ಪಡೆಯಲು ಆಗಿಲ್ಲ. ಸಂಘಟಕರ ಉದ್ದೇಶಗಳು ಸ್ಪಷ್ಟವಾಗಿವೆ.'' ಎಂದು ಸುರೇಂದ್ರನ್ ಬರೆದುಕೊಂಡಿದ್ದಾರೆ. ಈ ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸುವಂತೆ ಕೇರಳ ಪೊಲೀಸರು ಮತ್ತು ಕೇಂದ್ರ ತನಿಖಾ ಸಂಸ್ಥೆಗಳಿಗೆ ಒತ್ತಾಯಿಸಿದ್ದಾರೆ.