ಕಾಸರಗೋಡು : ಯಕ್ಷಗಾನ ಕಲಾವಿದರಿಗೆ ಸಮಗ್ರ ಮಾಹಿತಿ ಒದಗಿಸಿಕೊಡುವ ನಿಟ್ಟಿನಲ್ಲಿ ತೆಂಕು ತಿಟ್ಟು ಯಕ್ಷಮಾರ್ಗ ಸರಣಿಯ ಮೊದಲ ಪ್ರಾತ್ಯಕ್ಷಿಕೆಯನ್ನು ಹಿರಿಯ ಯಕ್ಷಗಾನ ಗುರು ಕರ್ಗಲ್ಲು ವಿಶ್ವೇಶ್ವರ ಭಟ್ ಅವರು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ನಡೆಸಿಕೊಟ್ಟರು.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾಪೆÇೀಷಕ ಶ್ರೀಕರ ಭಟ್ ಮುಂಡಾಜೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಯಕ್ಷಗಾನ ಎಲ್ಲೋ ಒಂದು ಕಡೆ ಹಾದಿ ತಪ್ಪುತ್ತಿದೆ. ಯಕ್ಷಗಾನ ಪ್ರದರ್ಶನಕ್ಕೂ ನಿಯಂತ್ರಕ ಶಕ್ತಿ ಬೇಕಾಗಿದೆ. ಯಕ್ಷಗಾನದ ಸತ್ವ ಕ್ಷೀಣಿಸದಂತೆ ನೋಡಿಕೊಳ್ಳುವುದು ಪ್ರಜ್ಞಾವಂತ ಕಲಾವಿದ ಹಾಗೂ ಪ್ರೇಕ್ಷಕರ ಜವಾಬ್ದಾರಿ ಎಂದು ತಿಳಿಸಿದರು. ಅಕಾಡೆಮಿಯೊಂದು ಮಾಡಬೇಕಾಗಿರುವ ಕಾರ್ಯಕ್ರಮವನ್ನು ಸಿರಿಬಾಗಿಲು ಪ್ರತಿಷ್ಟಾನದ ಮೂಲಕ ರಾಮಕೃಷ್ಣ ಮಯ್ಯ ಅವರು ನಡೆಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಹಿರಿಯ ಭಾಗವತ ದಿನೇಶ್ ಅಮ್ಮಣ್ಣಾಯ ಸಮಾರಂಭ ಉದ್ಘಾಟಿಸಿ ಮಾತನಾಡಿ, ಯಕ್ಷಗಾನ ಎಂಬುದು ಚೌಕಟ್ಟಿನ ಆಧಾರದಲ್ಲಿ ನಡೆಯಬೇಕಾದ ಕಲೆಯಾಗಿದ್ದು, ಆ ಚೌಕಟ್ಟು ಮೀರಿ ಹೋಗಬಾರದು ಎಂದು ತಿಳಿಸಿದರು.
ಕಲಾಪೆÇೀಷಕ, ಅಮೆರಿಕದಲ್ಲಿ ನೆಲೆಸಿರುವ ವಾಸುದೇವ ಐತಾಳ್ ಪಣಂಬೂರು, ದುಬೈ ನಿವಾಸಿ ಶೇಖರ ಡಿ.ಶೆಟ್ಟಿಗಾರ್ ಕಿನ್ನಿಗೋಳಿ ಅತಿಥಿಗಳಾಗಿ ಭಾಗವಹಿಸಿದ್ದರು. ಕಲಾವಿದ. ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ ಭಟ್ ಅವರನ್ನು ಕಾರ್ಯಕ್ರಮದ ಸಂಯೋಜಕ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅವರು ಪ್ರತಿಷ್ಠಾನದ ಪರವಾಗಿ ಗೌರವಿಸಿದರು. ಕಲಾವಿದ, ನಾಟ್ಯಗುರು ಲಕ್ಷ್ಮಣ ಕುಮಾರ್ ಮರಕಡ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ, ಕರ್ಗಲ್ಲು ವಿಶ್ವೇಶ್ವರ ಭಟ್ ಅವರು ಶಾಸ್ತ್ರೀಯ ಚೌಕಟ್ಟಿನಲ್ಲಿ ಯಕ್ಷಗಾನದ ನಾಟ್ಯ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಪ್ರಾತ್ಯಕ್ಷಿಕೆಯನ್ನು ಹಿರಿಯ ಕಲಾವಿದ ಶಂಭಯ್ಯ ಕಂಜರ್ಪಣೆ ನಿರ್ವಹಿಸಿದರು. ಆರಾಧನಾ ಕಲೆಯಾದ ಯಕ್ಷಗಾನದ ವಿವಿಧ ಆಯಾಮಗಳನ್ನು ಪ್ರಾತ್ಯಕ್ಷಿಕೆ ಮೂಲಕ ತೆರೆದಿಟ್ಟರು. ಜತೆಗೆ ಪೂರ್ವರಂಗದ ಮಹತ್ವದ ಬಗ್ಗೆ ವಿವರಿಸಿದರು. ಈ ಸಂದರ್ಭ ಪ್ರೇಕ್ಷಕರೊಂದಿಗೆ ಸಂವಾದ ನಡೆಯಿತು.