ಕಾಸರಗೋಡು: ತೃಕ್ಕರಿಪುರ ಒಳವರ ಮವಿಲ ಕಾಲನಿ ನಿವಾಸಿ, ತೃಕ್ಕರಿಪುರ ಬಸ್ ನಿಲ್ದಾಣ ಸನಿಹದ ಹೋಮ್‍ನರ್ಸಿಂಗ್ ಕೇಂದ್ರದಲ್ಲಿ ಹೋಮ್‍ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ರಜನಿ(34)ಕೊಲೆ ಪ್ರಕರಣದ ಒಂದನೇ ಆರೋಪಿ ನೀಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಸತೀಶನ್(41)ಎಂಬಾತನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(ಪ್ರಥಮ)ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿದೆ.
ಪ್ರಕರಣದ ಎರಡನೇ ಆರೋಪಿ ಚೆರ್ವತ್ತೂರು ಮದರ್ ತೆರೆಸಾ ಚಾರಿಟೇಬಲ್ ಟ್ರಸ್ಟ್ ಮಾಲಿಕ, ಮಾಹಿ ನಿವಾಸಿ ಬೆನೆಡಿಕ್ಟ್ ಅಲಿಯಾಸ್ ಬೆನ್ನಿ ಎಂಬಾತನಿಗೆ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿದೆ. ಸಾಕ್ಷಿ ನಾಶಗೊಳಿಸಿದ ಪ್ರಕರಣಕ್ಕೆ ಈ ಶಿಕ್ಷೆ ವಿಧಿಸಲಾಗಿದೆ.
2014 ಸೆ. 12ರಂದು ರಜನಿ ಕೊಲೆ ನಡೆದಿದೆ. ನಿಗೂಢವಾಗಿ ನಾಪತ್ತೆಯಾಗಿದ್ದ ರಜನಿ ಅವರ ಮೃತದೇಹ ಸತೀಶನ್ ಈ ಹಿಂದೆ ವಾಸಿಸುತ್ತಿದ್ದ ನೀಲೇಶ್ವರದ ಮನೆ ಸನಿಹದ ಹಿತ್ತಿಲಲ್ಲಿ ಹೂತುಹಕಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸತೀಶನ್ ಹಾಗೂ ರಜನಿ ಪರಸ್ಪರ ಪ್ರಿತಿಸುತ್ತಿದ್ದು, ಇವರ ಮಧ್ಯೆ ಹಣದ ವಹಿವಾಟು ನಡೆಯುತ್ತಿತ್ತು. ತನ್ನನ್ನು ವಿವಾಹವಾಗುವಂತೆ ರಜನಿ ಒತ್ತಾಯಿಸಿದಾಗ ತಲೆಗೆ ಬಡಿದು ಕೊಲೆಗೈದು ಮೃತದೇಹ ಮಣ್ಣಿನಲ್ಲಿ ಹೂತುಹಾಕಿರುವ ಬಗ್ಗೆ ಕೇಸು ದಾಖಲಾಗಿತ್ತು. ಕಾಸರಗೋಡಿನ ಅಂದಿನ ಪೊಲೀಸ್ ವರಿಷ್ಠಾಧಿಕಾರಿ ಥಾಮ್ಸನ್ ಜೋಸ್ ನೇತೃತ್ವದಲ್ಲಿ ನೀಲೇಶ್ವರ ಠಾಣೆ ಇನ್ಸ್‍ಪೆಕ್ಟರ್ ಪ್ರೇಮನ್ ತನಿಖೆ ನಡೆಸಿದ್ದರು.