ನವದೆಹಲಿ: 'ರಾಜಕೀಯ ಮೈತ್ರಿಕೂಟವನ್ನು ನಿಯಂತ್ರಿಸುವ ಯಾವುದೇ ಅಧಿಕಾರವನ್ನು ತಾನು ಹೊಂದಿಲ್ಲ' ಎಂದು ಚುನಾವಣಾ ಆಯೋಗವು ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
26 ರಾಜಕೀಯ ಪಕ್ಷಗಳು ರಚಿಸಿಕೊಂಡಿರುವ ಮೈತ್ರಿಕೂಟಕ್ಕೆ 'ಐ.ಎನ್.ಡಿ.ಐ.ಎ' (ಇಂಡಿಯಾ) ಎಂಬ ಸಂಕ್ಷಿಪ್ತ ರೂಪ ಬಳಸುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿ ಆಯೋಗವು ಈ ಪ್ರತಿಕ್ರಿಯೆ ನೀಡಿದೆ.
'ಚುನಾವಣೆಗಳನ್ನು ನಡೆಸುವುದು, ರಾಜಕೀಯ ಪಕ್ಷಗಳ ನೋಂದಣಿ ಮಾಡುವ ಅಧಿಕಾರವನ್ನು ಆಯೋಗ ಹೊಂದಿದೆ. ಆದರೆ, ರಾಜಕೀಯ ಮೈತ್ರಿಕೂಟವನ್ನು ಪ್ರಜಾಪ್ರತಿನಿಧಿ ಕಾಯ್ದೆ ಅಥವಾ ಸಂವಿಧಾನದ ಅಡಿ 'ನಿಯಂತ್ರಿತ ಘಟಕಗಳು' ಎಂಬುದಾಗಿ ಗುರುತಿಸಲಾಗಿಲ್ಲ' ಎಂದೂ ಆಯೋಗವು ಹೈಕೋರ್ಟ್‌ಗೆ ತಿಳಿಸಿದೆ.
'ಈ ಪ್ರತಿಕ್ರಿಯೆಯು ಆಯೋಗದ ಪಾತ್ರ ಏನು ಎಂಬುದನ್ನು ವಿವರಿಸುವುದಕ್ಕೆ ಮಾತ್ರ ಸೀಮಿತವಾದುದು. ಆದರೆ, ಐ.ಎನ್.ಡಿ.ಐ.ಎ ಎಂಬ ಸಂಕ್ಷಿಪ್ತರೂಪ ಬಳಕೆಯ ಸಿಂಧುತ್ವ ಕುರಿತ ತನ್ನ ವಿಶ್ಲೇಷಣೆ ಎಂಬುದಾಗಿ ಭಾವಿಸಬಾರದು' ಎಂದೂ ಆಯೋಗವು ಸ್ಪಷ್ಟಪಡಿಸಿದೆ.
'ರಾಜಕೀಯ ಪಕ್ಷಗಳು ರಚಿಸುವ ರಂಗ ಅಥವಾ ಮೈತ್ರಿಕೂಟವು ಪ್ರಜಾ ಪ್ರಾತಿನಿಧ್ಯ ಕಾಯ್ದೆಯಡಿ ಕಾನೂನುಬದ್ಧ ಘಟಕವಲ್ಲ. ಇಂತಹ ರಾಜಕೀಯ ಮೈತ್ರಿಕೂಟಗಳನ್ನು ನಿಯಂತ್ರಣ ಮಾಡುವುದಕ್ಕಾಗಿ ಶಾಸನಬದ್ಧ ಅವಕಾಶವೂ ಇಲ್ಲ' ಎಂಬ ಕೇರಳ ಹೈಕೋರ್ಟ್ ತೀರ್ಪನ್ನು ಕೂಡ ಆಯೋಗವು ತನ್ನ ಪ್ರತಿಕ್ರಿಯೆಯಲ್ಲಿ ಉಲ್ಲೇಖಿಸಿದೆ.
ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ' ಕುರಿತು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಗಿರೀಶ್ ಭಾರದ್ವಾಜ್ ಎಂಬುವವರು, 'ಮೈತ್ರಿಕೂಟಕ್ಕೆ 'ಇಂಡಿಯಾ' ಎಂಬ ಸಂಕ್ಷಿಪ್ತ ರೂಪವನ್ನು ಬಳಸುವ ಮೂಲಕ, ಕೆಲ ರಾಜಕೀಯ ಪಕ್ಷಗಳು ಅನಗತ್ಯವಾಗಿ ದೇಶದ ಹೆಸರಿನ ಲಾಭ ಪಡೆದುಕೊಳ್ಳುತ್ತಿವೆ' ಎಂದು ದೂರಿದ್ದರು.
'ಇಂಡಿಯಾ' ಎಂಬ ಸಂಕ್ಷಿಪ್ತರೂಪ ಬಳಕೆ ಮಾಡುವುದಕ್ಕೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಬೇಕು ಹಾಗೂ 'ಐ.ಎನ್.ಡಿ.ಐ.ಎ' ಅಕ್ಷರಗಳನ್ನು ಮುದ್ರಿಸಿರುವ ರಾಷ್ಟ್ರ ಧ್ವಜದ ಬಳಕೆಯನ್ನು ನಿಷೇಧಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಅರ್ಜಿಯ ವಿಚಾರಣೆ ಮಂಗಳವಾರವೂ ನಡೆಯಲಿದೆ.