ಕಾಸರಗೋಡು: ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ ಐಸಿಎಆರ್-ಸಿಪಿಸಿಆರ್‍ಐ ವಿಜ್ಞಾನಿ ಡಾ. ಆರ್. ಪಾಂಡಿಸೆಲ್ವಂ ಅವರು 2023ನೇ ಸಾಲಿನ ಅಂತಾರಾಷ್ಟ್ರೀಯ ಮಟ್ಟದ ಅಗ್ರ ಶೇ.2 ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಅಮೆರಿಕದ ಸ್ಟಾನ್‍ಫೋರ್ಡ್ ವಿಶ್ವ ವಿದ್ಯಾಲಯ ಅ. 4ರಂದು ಪ್ರಕಟಿಸಿರುವ ಸಂಶೋಧನಾ ವಿಜ್ಞಾನಿಗಳ ಪಟ್ಟಿಯಲ್ಲಿ ಡಾ. ಆರ್. ಪಾಂಡಿಸೆಲ್ವಂ ಈ ಸ್ಥಾನ ಪಡೆದುಕೊಂಡಿದ್ದಾರೆ. ಆಹಾರ ಎಂಜಿನಿಯರಿಂಗ್ ಸಂಶೋಧನೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 2010 ರಲ್ಲಿ ಬಿ.ಟೆಕ್ ಅಗ್ರಿಕಲ್ಚರಲ್ ಇಂಜಿನಿಯರಿಂಗ್ ಮತ್ತು 2012 ರಲ್ಲಿ ತಮಿಳುನಾಡು ಕೃಷಿ ವಿಶ್ವವಿದ್ಯಾಲಯದಿಂದ ಎಂ.ಟೆಕ್. (ಕೃಷಿ ಸಂಸ್ಕರಣೆ ಮತ್ತು ಆಹಾರ ಎಂಜಿನಿಯರಿಂಗ್), ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್(2015) ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಅವರು 2016ರಲ್ಲಿ ಕಾಸರಗೋಡಿನ ಸಿಪಿಸಿಆರ್‍ಐ ವಿಜ್ಞಾನಿಯಾಗಿ (ಅಗ್ರಿಕಲ್ಚರಲ್ ಪೆÇ್ರಸೆಸ್ ಎಂಜಿನಿಯರಿಂಗ್) ಐಸಿಎಆರ್‍ಗೆ ಸೇರ್ಪಡೆಗೊಂಡಿದ್ದರು.
ಡಾ. ಆರ್. ಪಾಂಡಿಸೆಲ್ವಂ ಅವರು ಎಳನೀರು ಸಂಸ್ಕರಣಾ ಯಂತ್ರದ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ, ಎಳನೀರು ಸಂಸ್ಕರಣಾ ಯಂತ್ರಗಳು ಸೇರಿದಂತೆ ನಾನಾ ರೀತಿಯ ಯಂತ್ರಗಳ ಆವಿಷ್ಕಾರದಲ್ಲಿ, ಅನೇಕ ಮೌಲ್ಯವರ್ಧಿತ ಆಹಾರ ಉತ್ಪನ್ನಗಳಾದ ಕಲ್ಪ ಕ್ರಂಚ್, ಫೆÇೀಮ್-ಮ್ಯಾಟ್ ಡ್ರೈಡ್ ಕೋಕನಟ್ ಮಿಲ್ಕ್ ಪೌಡರ್, ಘನೀಕೃತ ತೆಂಗಿನಕಾಯಿ ಮತ್ತು ಬಲಿತ ತೆಂಗಿನಕಾಯಿ ನೀರು ಆಧಾರಿತ ಪಾನೀಯಗಳ ತಯಾರಿಯಲ್ಲೂ ಮಹತ್ವದ ಕೊಡುಗೆ ನೀಡಿದ್ದಾರೆ.
ಇವರು ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್ (ಎನ್‍ಎಎಎಸ್) ಯಂಗ್ ಸೈಂಟಿಸ್ಟ್ ಅವಾರ್ಡ್-2020, ಎನ್‍ಎಎಎಸ್ ಅಸೋಸಿಯೇಟ್ 2021 ಮತ್ತು ಇಂಡಿಯನ್ ಸೊಸೈಟಿ ಆಫ್ ಅಗ್ರಿಕಲ್ಚರಲ್ ಇಂಜಿನಿಯರ್ಸ್ (ಐಎಸ್‍ಎಇ)-ಡಿಸ್ಟಿಂಗ್ವಿಶ್ಡ್ ಸರ್ವಿಸ್ ಅವಾರ್ಡ್-2020ಗೆ ಭಾಜನರಾಗಿದ್ದಾರೆ.