ಜೋಧ್‌ಪುರ: ವಿಶ್ವದಾದ್ಯಂತ ಭಾರತದ ಹೆಸರು ಕೇಳಿಬರುತ್ತಿದೆ. ಆದರೆ, ಕಾಂಗ್ರೆಸ್‌ಗೆ ಇದನ್ನು ಸಹಿಸಲಾಗುತ್ತಿಲ್ಲ. ಬಿಜೆಪಿ ವಿರೋಧಿಸುವ ಭರದಲ್ಲಿ ದೇಶವನ್ನು ವಿರೋಧ ಮಾಡಲು ಆರಂಭಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಟೀಕಿಸಿದರು.
ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ರಾಜಸ್ಥಾನದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮಾಫಿಯಾವು ಲಕ್ಷಾಂತರ ಯುವಜನರ ಭವಿಷ್ಯ ನಾಶ ಮಾಡಿದೆ ಎಂದರು.
ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಅಶೋಕ್ ಗೆಹಲೋತ್ ಸರ್ಕಾರವನ್ನು ಟೀಕಿಸಿದರು. ವಜಾಗೊಂಡಿರುವ ಸಚಿವ ರಾಜೇಂದ್ರ ಗುಧಾ ಅವರು ಹೊಂದಿರುವ 'ಕೆಂಪು ಡೈರಿ'ಯ ಬಗ್ಗೆಯೂ ಪ್ರಸ್ತಾಪಿಸಿದರು. ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರ ಹಣಕಾಸು ವ್ಯವಹಾರದ ವಿವರಗಳು ಡೈರಿಯಲ್ಲಿದೆ ಎಂದು ಗುಧಾ ಹೇಳಿದ್ದರು.
'ಕಾಂಗ್ರೆಸ್‌ನ ಭ್ರಷ್ಟಾಚಾರದ ಈ ಎಲ್ಲಾ ಕರಾಳ ಕೃತ್ಯಗಳು' ಈ ಡೈರಿಯಲ್ಲಿದೆ. ಇದನ್ನೆಲ್ಲಾ ಬಹಿರಂಗಪಡಿಸಲು ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು' ಎಂದು ಮೋದಿ ಹೇಳಿದರು.
ಸರ್ಕಾರದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಾಲ್ಗೊಂಡಿಲ್ಲ. ಏಕೆಂದರೆ ಮೋದಿ ಬಂದರೆ ಹೇಗಿದ್ದರೂ ನಡೆಯುತ್ತದೆ ಎಂಬ ವಿಶ್ವಾಸ ಅವರದ್ದು ಎಂದು ಗೆಹಲೋತ್ ಅವರನ್ನು ಟೀಕಿಸಿದರು.
ಶೀಘ್ರದಲ್ಲೇ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ₹ 5000 ಕೋಟಿ ಮೊತ್ತದ ವಿವಿಧ ಯೋಜನೆಗಳನ್ನು ಮೋದಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರಸ್ತೆ, ರೈಲು, ವಿಮಾನಯಾನ, ಆರೋಗ್ಯ ಮತ್ತು ಉನ್ನತ ಶಿಕ್ಷಣ ವಲಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು.
ಜೋಧ್‌ಪುರದ ಏಮ್ಸ್‌ನಲ್ಲಿ ₹ 350 ಕೋಟಿ ವೆಚ್ಚದಲ್ಲಿ ಟ್ರಾಮ ಸೆಂಟರ್, ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಯೋಜನೆಯಡಿ (ಪಿಎಂ- ಎಬಿಎಚ್‌ಐಎಂ) 7 ತುರ್ತು ನಿಗಾ ಘಟಕಗಳು, ಜೋಧ್‌ಪುರದ ವಿಮಾನನಿಲ್ದಾಣದಲ್ಲಿ ₹480 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಟರ್ಮಿನಲ್ ಕಟ್ಟಡ ಮತ್ತು ₹1,475 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ವಿವಿಧ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಐಐಟಿ ಜೋಧ್‌ಪುರ ಕ್ಯಾಂಪಸ್ ಅನ್ನು ಉದ್ಘಾಟಿಸಲಾಯಿತು.
ಎರಡು ವಾರದಲ್ಲಿ ಮೋದಿ ಅವರು ಪಾಲ್ಗೊಂಡ ಮೂರನೇ ರ್‍ಯಾಲಿ ಇದು. ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಭಾಗವಹಿಸಿದ್ದರು.