ಕಾಸರಗೋಡು:ಬಾಲಕಿಯರ ಅಂತಾರಾಷ್ಟ್ರೀಯ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಜಿಲ್ಲಾಡಳಿತ ನೇತೃತ್ವದಲ್ಲಿ 'ಬೇಟಿ ಬಚಾವೋ ಬೇಟಿ ಪಢಾವೋ' ಎಂಬ ವಿಷಯದೊಂದಿಗೆ ಕಲಾಜಾಥಾ ಜಿಲ್ಲೆಯ ವಿವಿಧೆಡೆ ಜಾಗೃತಿ ಪರ್ಯಟನೆ ನಡೆಸಿತು.
ಜಿಲ್ಲಾಧಿಕಾರಿ ಕಚೇರಿ ವಠಾರದಿಂದ ಆರಂಭಗೊಂಡ ಕಲಾಜಾಥಾಕ್ಕೆ ಜಿಲ್ಲಾಧಿಕಾರಿ ಕೆ. ಇನ್‍ಬಾಶೇಖರ್ ಚಾಲನೆ ನೀಡಿದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಅಧಿಕಾರಿ ವಿ.ಎಸ್.ಶಿಮ್ನಾ ಅಧ್ಯಕ್ಷತೆ ವಹಿಸಿದ್ದರು. ಐಸಿಡಿಎಸ್ ಕಾಸರಗೋಡು ಅಡಿಷನಲ್ ನೇತೃತ್ವದಲ್ಲಿ ಶಿಂಗಾರಿ ಮೇಳ, ಬೀದಿ ನಾಟಕ, ಒಟ್ಟೆಂತುಳ್ಳಲ್ ಆಯೋಜಿಸಲಾಗಿತ್ತು. ಹೆಣ್ಣು ಮಕ್ಕಳ ಪ್ರಗತಿಯನ್ನು ಖಾತ್ರಿಪಡಿಸುವ ಮತ್ತು ಅವರ ಹಕ್ಕುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. 'ಹೆಣ್ಣುಮಕ್ಕಳ ಹಕ್ಕುಗಳಲ್ಲಿ ಹೂಡಿಕೆ ಮಾಡಿ-ನಮ್ಮ ನಾಯಕತ್ವ ಮತ್ತು ಯೋಗಕ್ಷೇಮ'.
ದೇಶದಲ್ಲಿ ಮಹಿಳಾ ತಾರತಮ್ಯ ಮತ್ತು ಮಹಿಳಾ ಸಬಲೀಕರಣದ ಕಾಳಜಿಗಳನ್ನು ಲಿಂಕ್ ಮಾಡಿ 'ಬೇಟಿ ಬಚಾವೋ ಬೇಟಿ ಪಢಾವೋ'ಯೋಜನೆಯನ್ನು ಕೆಂದ್ರ ಸರ್ಕಾರ 2015ರಲ್ಲಿ ಜಾರಿಗೆ ತಂದಿದೆ. ಹೆಣ್ಣು ಮಕ್ಕಳ ರಕ್ಷಣೆ ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಯೋಜನೆಯ ಉದ್ದೇಶವಾಗಿದೆ. 'ಬೇಟಿ ಬಚಾವೋ ಬೇಟಿ ಪಢಾವೋ' ಯೋಜನೆಯ ಮಹತ್ವದ ಬಗ್ಗೆ ಜನರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಕಲಾ ಜಾಥಾ ಆಯೋಜಿಸಲಾಗಿತ್ತು. ಹೆಣ್ಣು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಿಲ್ಲೆಯ ವಿವಿಧೆಡೆ ವಿವಿಧ ಕಲೆಗಳಾದ ಬೀದಿ ನಾಟಕ, ಒಟ್ಟೆಂತುಳ್ಳಲ್, ನೃತ್ಯ ಶಿಲ್ಪ, ಫ್ಲ್ಯಾಶ್ ಮಾಬ್, ಶಿಂಕಾರಿ ಮೇಳಗಳನ್ನು ಪ್ರದರ್ಶಿಸಲಾಯಿತು.