ಬದಿಯಡ್ಕ: ಕೇರಳ ಮರಾಟಿ ಯುವಜನ ವೇದಿಕೆ ಬದಿಯಡ್ಕ ಕಾಸರಗೋಡು ಇದರ ಉದ್ಘಾಟನೆ ಭಾನುವಾರ ಬದಿಯಡ್ಕದಲ್ಲಿ ಜರಗಿತು. ಪ್ರೊ. ರಾಮ ನಾಯ್ಕ್ ಪುತ್ತೂರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಯುವಕರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡಿದರು. ಯುವಜನತೆ ಸಂಘಟಿತರಾದರೆ ಮಾತ್ರ ಸಮಾಜ ಬಲಿಷ್ಠವಾಗಲು ಸಾಧ್ಯವಿದೆ. ಊರಿನ ಯುವಕರೆಲ್ಲರೂ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಕರೆಯಿತ್ತರು.
ಮುಖ್ಯ ಅತಿಥಿಗಳಾಗಿ ಯಕ್ಷಗಾನ ಕಲಾವಿದ, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯ ಅಧ್ಯಕ್ಷ ಚನಿಯಪ್ಪ ನಾಯ್ಕ್, ಕೇರಳ ಮರಾಟಿ ಶಾರದೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯರಾಮ ನಾಯ್ಕ್ ಕುಂಟಾಲುಮೂಲೆ, ಶಾರದೋತ್ಸವ ಸಮಿತಿಯ ಸ್ಥಾಪಕಾಧ್ಯಕ್ಷ ನಿವೃತ್ತ ಅಧ್ಯಾಪಕ ಈಶ್ವರ್ ನಾಯ್ಕ್ ಪೆರಡಾಲ, ಜಯಂತಿ ಚಕ್ರೇಶ್ವರ, ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷೆ ಕಮಲ ಪೆರಡಾಲ, ಜೊತೆಕಾರ್ಯದರ್ಶಿ ಸುಬ್ರಹ್ಮಣ್ಯ ಕನಕಪ್ಪಾಡಿ, ಕೆ.ಕೆ.ನಾಯ್ಕ್ ಕಾಡಮನೆ, ರಜನಿ ಕರಿಂಬಿಲ ಶುಭಾಶಂಸನೆಗೈದರು.
ವಿವಿಧ ಬೇಡಿಕೆಗಳು :
ಮರಾಟಿ ಸಮಾಜದವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಸರಿಯಾಗಿ ದೊರೆಯುವುದಿಲ್ಲ. ಉನ್ನತ ವಿದ್ಯಾಭ್ಯಾಸವನ್ನು ಮುಗಿಸಿದ ಯುವಜನತೆಗೆ ಸೂಕ್ತ ಉದ್ಯೋಗ ಲಭಿಸುವುದಿಲ್ಲ. ನಮ್ಮ ಸಮಾಜದ ಎಸ್.ಟಿ. ಆದಿವಾಸಿಯವರಿಗೆ ಮಾತ್ರ ಲೋಕಸೇವಾ ಆಯೋಗದ ಪರೀಕ್ಷೆ ಕನ್ನಡದಲ್ಲಿ ಬರೆಯಬಹುದೆಂದು ತಿಳಿಸಿ, ಕನ್ನಡ ಕಲಿತ ನಮ್ಮ ಮಕ್ಕಳು ಅರ್ಜಿ ಸಲ್ಲಿಸಿದರೂ ಪರೀಕ್ಷೆ ಬರೆಯುವಾಗ ನಮಗೆ ಕನ್ನಡದ ಬದಲು ಮಲಯಾಳಂ ಪ್ರಶ್ನೆಪತ್ರಿಕೆಯನ್ನು ನೀಡಿ ನಮ್ಮ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಸ್ವಂತ ಉದ್ಯೋಗಕ್ಕೆ ಬ್ಯಾಂಕ್ ಸಾಲ ಕೇಳಿದರೆ ಅದಕ್ಕೆ ಬೇಕಾದ ದಾಖಲೆಗಳನ್ನು ನೀಡಿದರೂ ಸಾಲ ಮಂಜೂರುಗೊಳಿಸದೆ ಸತಾಯಿಸುವುದೇ ಹೆಚ್ಚಾಗಿದೆ. ಯುವಜನತೆಗೆ ಟ್ರೈಬಲ್‍ನಿಂದ ಸಮರ್ಪಕ ಮಾಹಿತಿ ಲಭ್ಯವಾಗುತ್ತಿಲ್ಲ. ಉದ್ಯೋಗ ವಿನಿಮಯ ಕಚೇರಿಯಲ್ಲಿ ನಮ್ಮ ಸಮಾಜಕ್ಕೆ ಮೀಸಲಾತಿ ಇದ್ದರೂ ಉದ್ಯೋಗ ಲಭಿಸುವುದಿಲ್ಲ ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒಗ್ಗಟ್ಟಿನಿಂದ ಮುಂದುವರಿಯಲು ತೀರ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಕೇರಳ ಮರಾಟಿ ಯುವಜನವೇದಿಕೆಯ ನೂತನ ಸಮಿತಿಯನ್ನು ರೂಪೀಕರಿಸಲಾಯಿತು. ಅಧ್ಯಕ್ಷರಾಗಿ ಪ್ರಸಾದ್ ಕಿನ್ನಿಮಾಣಿ, ಉಪಾಧ್ಯಕ್ಷರಾಗಿ ಹರೀಶ್ ಮಾನ್ಯ, ಪ್ರಧಾನ ಕಾರ್ಯದರ್ಶಿಯಾಗಿ ಮೋಹನ್ ಚೇರ್ಕೂಡ್ಲು, ಕಾರ್ಯದರ್ಶಿಯಾಗಿ ಪ್ರಸನ್ನ ಪುತ್ತಿಗೆ, ಸಂಚಾಲಕರಾಗಿ ಲೋಕೇಶ್ ಅಡೂರು, ಸಹ ಸಂಚಾಲಕರಾಗಿ ಸದಾನಂದ ಬೆದ್ರಂಪಳ್ಳ, ಕೋಶಾಧಿಕಾರಿಯಾಗಿ ಮೋಹನ್ ಕೆಡೆಂಜಿ ಹಾಗೂ 60 ಮಂದಿಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಕುಮಾರಿ ವರ್ಷಾ ಲಕ್ಷ್ಮಣ ಪ್ರಾರ್ಥನೆ ಹಾಡಿದರು. ಸಂದೀಪ್ ಪೆರಡಾಲ ಸ್ವಾಗತಿಸಿ, ಉಮೇಶ್ ಕಾಡಮನೆ ವಂದಿಸಿದರು.