ನವದೆಹಲಿ: ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ದಾಖಲಿಸಲಾದ ಪ್ರಕರಣದಲ್ಲಿ ತಮ್ಮ ಬಂಧನ ಪ್ರಶ್ನಿಸಿ ನ್ಯೂಸ್‌ಕ್ಲಿಕ್ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ವೆಬ್‌ಸೈಟ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಸೋಮವಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಅರ್ಜಿದಾರರನ್ನು ಪ್ರತಿನಿಧಿಸುವ ಹಿರಿಯ ವಕೀಲ ಕಪಿಲ್ ಸಿಬಲ್‌ಗೆ ಪ್ರಕರಣದ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಲು ಹೇಳಿದ್ದು, ತುರ್ತು ವಿಚಾರಣೆಯನ್ನು ನಿರ್ಧರಿಸುವುದಾಗಿ ಹೇಳಿದೆ.
ಇದು ನ್ಯೂಸ್‌ಕ್ಲಿಕ್ ವಿಷಯವಾಗಿದೆ. ಪತ್ರಕರ್ತರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಆರೋಪಿಗಳಲ್ಲಿ ಒಬ್ಬರು 75 ವರ್ಷದ ವ್ಯಕ್ತಿ ಎಂದು ಸಿಬಲ್ ಪೀಠಕ್ಕೆ ತಿಳಿಸಿದರು.
ಅ.3ರಂದು ದೆಹಲಿ ಪೊಲೀಸರ ವಿಶೇಷ ತಂಡ ಇಬ್ಬರನ್ನೂ ಬಂಧಿಸಿತ್ತು. ತಮ್ಮ ಬಂಧನ ಮತ್ತು 7 ದಿನಗಳ ಪೊಲೀಸ್ ಕಸ್ಟಡಿಯನ್ನು ಪ್ರಶ್ನಿಸಿ ಇವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಮಧ್ಯಂತರ ಪರಿಹಾರವಾಗಿ ತಕ್ಷಣ ಬಿಡುಗಡೆಗೆ ಕೋರಿದ್ದರು.
ಅ.10ರಂದು ವಿಚಾರಣಾ ನ್ಯಾಯಾಲಯ ಅವರನ್ನು 10 ದಿನಗಳ ನ್ಯಾಯಾಂಗ ಬಂಧನಕ್ಕೆ ಸೂಚಿಸಿತ್ತು. ಚೀನಾ ಪರ ಪ್ರಚಾರ ಮಾಡಲು ಹಣ ಪಡೆದ ಆರೋಪದಲ್ಲಿ ಇಬ್ಬರ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅ.13ರಂದು, ದೆಹಲಿ ಹೈಕೋರ್ಟ್ ಪೀಠವು ಪ್ರಕರಣದಲ್ಲಿ ಪುರ್ಕಾಯಸ್ಥ ಮತ್ತು ಚಕ್ರವರ್ತಿ ಅವರ ಬಂಧನ ಹಾಗೂ ಪೊಲೀಸ್ ರಿಮಾಂಡ್ ವಿರುದ್ಧದ ಮನವಿಯನ್ನು ವಜಾಗೊಳಿಸಿತು. ಭಾರತದಲ್ಲಿ ಚೀನಾ ಪರ ಪ್ರಚಾರವನ್ನು ಹರಡಲು ಹಣ ಪಡೆದ ಆರೋಪದಡಿಯಲ್ಲಿ ದೆಹಲಿ ಪೊಲೀಸರು ಪುರಕಾಯಸ್ಥ ಮತ್ತು ಚಕ್ರವರ್ತಿಯನ್ನು ಅ.3 ರಂದು ಬಂಧಿಸಿದ್ದರು.
ನ್ಯೂಸ್‌ಕ್ಲಿಕ್ ಚೀನಾದಿಂದ ದೊಡ್ಡ ಮೊತ್ತದ ಹಣವನ್ನು ಸ್ವೀಕರಿಸಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದೆ. ಇದು ಭಾರತದ ಸಾರ್ವಭೌಮತೆಗೆ ಧಕ್ಕೆ ತರಲು ಮತ್ತು ಅದರ ನಾಗರಿಕರ ನಡುವೆ ವೈಷಮ್ಯವನ್ನು ಬಿತ್ತಲು ಉದ್ದೇಶಿಸಿದೆ. 2019ರ ಲೋಕಸಭಾ ಚುನಾವಣೆಯನ್ನು ಹಾಳು ಮಾಡಲು ಪುರಕಾಯಸ್ಥ ಅವರು ಪೀಪಲ್ಸ್ ಅಲೈಯನ್ಸ್ ಫಾರ್ ಡೆಮಾಕ್ರಸಿ ಅಂಡ್ ಸೆಕ್ಯುಲರಿಸಂ (PADS) ಜತೆ ಸಂಚು ರೂಪಿಸಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.