ರಾಯ ಬರೇಲಿ: ಉತ್ತರ ಪ್ರದೇಶದ ರಾಯ ಬರೇಲಿಯಲ್ಲಿ ತನ್ನ ಪ್ರಿಯಕರನನ್ನು ಭೇಟಿಯಾಗದಂತೆ ತಡೆದಿದ್ದಕ್ಕೆ 16 ವರ್ಷದ ಬಾಲಕಿಯೊಬ್ಬಳು ತನ್ನ ತಾಯಿಗೆ ವಿಷವಿಕ್ಕಿರುವ ಆಘಾತಕಾರಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷ ಬೆರೆಸಿದ ಚಹಾ ಸೇವಿಸಿ ತಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಾಗ ಬಾಲಕಿ ಆತಂಕಗೊಂಡು ನೆರೆಹೊರೆಯವರ ಸಹಾಯ ಕೇಳಿದ್ದಾಳೆ.
ತಾಯಿ ಸಂಗೀತಾ ಯಾದವ್ (48) ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈಗ ಅವರು ಅಪಾಯದಿಂದ ಪಾರಾಗಿದ್ದಾರೆ.
ರಾಯ್ ಬರೇಲಿ ಪೊಲೀಸ್ ಅಧೀಕ್ಷಕ (ಎಸ್‌ಪಿ) ಅಲೋಕ್ ಪ್ರಿಯದರ್ಶಿನಿ ಮಾತನಾಡಿ, ಬಾಲಕಿ ಮತ್ತು ಆಕೆಯ ಗೆಳೆಯನ ವಿರುದ್ಧ ಐಪಿಸಿ ಸೆಕ್ಷನ್ 328 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಬಾಲಕಿ ತನ್ನ ಗೆಳೆಯ ಹಿಮಾಂಶು ಕುಮಾರ್ (18) ನನ್ನು ಮಾರುಕಟ್ಟೆಯಿಂದ ವಿಷ ತರುವಂತೆ ಹೇಳಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ವಿಚಾರಣೆ ನಡೆಸಲಾಗುತ್ತಿದ್ದು, ಹಿಮಾಂಶು ತಲೆಮರೆಸಿಕೊಂಡಿದ್ದಾನೆ ಎಂದು ಎಸ್‌ಪಿ ತಿಳಿಸಿದ್ದಾರೆ.
ದೀಹ್ ಸ್ಟೇಷನ್ ಹೌಸ್ ಆಫೀಸರ್ ಜಿತೇಂದ್ರ ಪ್ರತಾಪ್ ಸಿಂಗ್ ಮಾತನಾಡಿ, ಬಾಲಕಿಯ ತಂದೆ ಬೇರೆ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಆಕೆ ತನ್ನ ತಾಯಿಯೊಂದಿಗೆ ವಾಸವಾಗಿದ್ದಾಳೆ. ಬಾಲಕಿ ಅದೇ ಹಳ್ಳಿಯಲ್ಲಿ (ಪುರ್ವಾ) ವಾಸಿಸುವ ಹಿಮಾಂಶುನನ್ನು ಪ್ರೀತಿಸುತ್ತಿದ್ದಳು. ಹಿಮಾಂಶು ಜೊತೆಗಿನ ಭೇಟಿಗೆ ವಿರೋಧಿಸಿದ ಕಾರಣ ಸಂಗೀತಾ ಅವರೊಂದಿಗೆ ಆಗ್ಗಾಗ್ಗೆ ಬಾಲಕಿ ಜಗಳವಾಡುತ್ತಿದ್ದಳು' ಎಂದು ತಿಳಿಸಿದರು.
ಹಿಮಾಂಶುವನ್ನು ಭೇಟಿಯಾಗುವುದನ್ನು ನಿಲ್ಲಿಸು, ಇಲ್ಲದಿದ್ದರೆ ಮನೆಯಲ್ಲಿ ಕೂಡಿ ಹಾಕುವುದಾಗಿ ಸಂಗೀತಾ ತನ್ನ ಮಗಳಿಗೆ ಎಚ್ಚರಿಸಿದ್ದರು. ಇದರಿಂದ ಕೋಪಗೊಂಡ ಮಗಳು ತಾಯಿಗೆ ವಿಷವಿಕ್ಕಲು ನಿರ್ಧರಿಸಿದ್ದಾಳೆ.
ತಾಯಿ ಹೇಳಿಕೆ ಮೇರೆಗೆ ಆಕೆಯ ಮಗಳು ಮತ್ತು ಹಿಮಾಂಶು ವಿರುದ್ಧ ಎಫ್‌ಐಆರ್ ದಾಖಲಾಗಿದೆ.