ನವದೆಹಲಿ: ಗಾಜಾದಲ್ಲಿ ಕದನ ವಿರಾಮಕ್ಕೆ ಕರೆ ನೀಡುವ ವಿಶ್ವಸಂಸ್ಥೆಯ ನಿರ್ಣಯದಿಂದ ಭಾರತ ಹೊರಗುಳಿದಿರುವುದು ಆಘಾತಕಾರಿ. ಅದು ತನ್ನ ವಿದೇಶಾಂಗ ನೀತಿಯನ್ನು ಅಮೆರಿಕಾ ಸಾಮ್ರಾಜ್ಯಶಾಹಿಯ ಅಧೀನ ಮಿತ್ರ ಎಂದು ಸಾಬೀತುಪಡಿಸುವಂತೆ ತೋರಿಸುತ್ತದೆ ಎಂದು ಸಿಪಿಐ(ಎಂ) ಮತ್ತು ಸಿಪಿಐ ಶನಿವಾರ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
'ಗಾಜಾದಲ್ಲಿ ಈ ನರಮೇಧದ ಆಕ್ರಮಣವನ್ನು ನಿಲ್ಲಿಸಿ' ಎಂಬ ಘೋಷಣೆಯೊಂದಿಗೆ ಪ್ಯಾಲೆಸ್ಟೀನ್‌ಗೆ ಬೆಂಬಲ ಸೂಚಿಸಲು ಸಿಪಿಐ(ಎಂ) ತನ್ನ ಎಕೆಜಿ ಭವನದ ಕಚೇರಿಯಲ್ಲಿ ಭಾನುವಾರ ಪ್ರತಿಭಟನೆ ನಡೆಸುವುದಾಗಿ ಹೇಳಿದೆ.
ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲಿ ಆಕ್ರಮಣದಲ್ಲಿ ನಾಗರಿಕರ ರಕ್ಷಣೆ, ಕಾನೂನು ಮತ್ತು ಮಾನವೀಯ ಹೊಣೆಗಾರಿಕೆಯನ್ನು ಎತ್ತಿಹಿಡಿಯುವುದು' ಎಂಬ ಘೋಷ ವಾಕ್ಯದೊಂದಿಗೆ ಶುಕ್ರವಾರ ವಿಶ್ವಸಂಸ್ಥೆ ಜೋರ್ಡಾನ್ ಕರಡು ನಿರ್ಣಯ ಪ್ರಕಟಿಸಿದೆ. ಅಂಗೀಕರಿಸಿದ ನಿರ್ಣಯಕ್ಕೆ ಭಾರತ ಗೈರುಹಾಜರಾಗಿದ್ದು ಆಘಾತಕಾರಿಯಾಗಿದೆ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮತ್ತು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಹೇಳಿದ್ದಾರೆ. .
ಗಾಜಾದಲ್ಲಿ ಮಾನವೀಯ ನೆಲೆಯಲ್ಲಿ ಕದನ ವಿರಾಮ ಘೋಷಿಸಬೇಕೆಂಬ ನಿರ್ಧಾರಕ್ಕೆ ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳ ಒಪ್ಪಿಗೆಗೆ ಯಾಚಿಸಿತ್ತು. ವಿಶ್ವಸಂಸ್ಥೆಯ ಈ ನಿರ್ಣಯಕ್ಕೆ 121 ಸದಸ್ಯ ರಾಷ್ಟ್ರಗಳು ಸಮ್ಮತಿಸಿದರೆ, 14 ರಾಷ್ಟ್ರಗಳು ವಿರುದ್ಧ ಮತ ಚಲಾಯಿಸಿದ್ದವು. 44 ದೇಶಗಳು ಈ ನಿರ್ಣಯದಿಂದ ಹೊರಗುಳಿದಿವೆ. ಅದರಲ್ಲಿ ಭಾರತ ಕೂಡ ಒಂದು.