ಕೋಝಿಕ್ಕೋಡ್: ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಚಿನ್ನದ ಕಳ್ಳ ಸಾಗಾಣೆ ಅವ್ಯಾಹತವಾಗಿರುವಂತೆ ಪ್ರಕರಣದಲ್ಲಿ ಸಿಐಎಸ್‍ಎಫ್ ಸಹಾಯಕ ಕಮಾಂಡೆಂಟ್ ನವೀನ್ ಅವರ ಫ್ಲಾಟ್ ಗೆ ಪೋಲೀಸರು ಶೋಧ ನಡೆಸಿದ್ದಾರೆ.
ಕೊಂಡೊಟ್ಟಿ ಡಿವೈಎಸ್ಪಿ ಮೂಸಾ ವಲ್ಲಿಕಾಡನ್ ನೇತೃತ್ವದಲ್ಲಿ ಕೊಂಡೊಟ್ಟಿ ತಳೇಕರ ನವೀನ್ ಅವರ ನಿವಾಸದಲ್ಲಿ ತನಿಖೆ ನಡೆಸಲಾಗುತ್ತಿದೆ. ಘಟನೆ ಕುರಿತು ಕಸ್ಟಮ್ಸ್ ಪ್ರಿವೆಂಟಿವ್ ವಿಭಾಗವೂ ತನಿಖೆ ಆರಂಭಿಸಿದೆ.
ಚಿನ್ನ ಕಳ್ಳಸಾಗಣೆಯಲ್ಲಿ ಉನ್ನತ ಅಧಿಕಾರಿ ಶಾಮೀಲಾಗಿ ದಂಧೆ ನಡೆಸುತ್ತಿರುವುದನ್ನು ನಿನ್ನೆ ಪೋಲೀಸರು ಪತ್ತೆ ಹಚ್ಚಿದ್ದರು. ಮಲಪ್ಪುರಂ ಎಸ್ಪಿ ಸುಜಿತ್ ದಾಸ್ ನೇತೃತ್ವದಲ್ಲಿ ತನಿಖೆ ನಡೆಸಿದಾಗ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಸಿಐಎಸ್.ಎಫ್ ಸಹಾಯಕ ಕಮಾಂಡೆಂಟ್ ನವೀನ್ ಮತ್ತು ಕಸ್ಟಮ್ಸ್ ಅಧಿಕಾರಿ ಚಿನ್ನ ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವುದು ಕಂಡುಬಂದಿತ್ತು. ಇದರಿಂದಾಗಿ ಇಂದು ಬೆಳಗ್ಗೆಯಿಂದಲೇ ನವೀನ್ ನಿವಾಸದಲ್ಲಿ ಶೋಧ ಕಾರ್ಯ ಆರಂಭವಾಗಿದೆ.
ಇಬ್ಬರು ಅಧಿಕಾರಿಗಳು ಮತ್ತು ಚಿನ್ನದ ಕಳ್ಳಸಾಗಣೆ ಮಾಫಿಯಾ ತಂಡ 60 ಬಾರಿ ಚಿನ್ನ ಕಳ್ಳಸಾಗಣೆ ಮಾಡಿದೆ. ಕಸ್ಟಮ್ಸ್ ಅಧಿಕಾರಿಗಳ ಕರ್ತವ್ಯ ವೇಳಾಪಟ್ಟಿಯನ್ನು ಕಳ್ಳಸಾಗಣೆ ಗ್ಯಾಂಗ್ ಹೊಂದಿತ್ತು ಎಂದು ಪೋಲೀಸರು ಕಂಡುಕೊಂಡಿದ್ದಾರೆ. ವಿಮಾನ ನಿಲ್ದಾಣದ ಲಗೇಜ್ ಪರಿಚಾರಕ ಶgಫ್ ಅಲಿ ಹಾಗೂ ಚಿನ್ನ ಸಾಗಿಸಲು ಬಂದಿದ್ದ ಕೊಂಡೋಟಿ ನಿವಾಸಿ ಫೈಸಲ್ ಅವರಿಂದ ಪೋಲೀಸರಿಗೆ ಮಹತ್ವದ ಮಾಹಿತಿ ಸಿಕ್ಕಿದೆ. ಕಳೆದ ಬಾರಿ ಕೊಡುವಳ್ಳಿ ಮೂಲದ ರಫೀಕ್ ಎಂಬಾತನಿಗಾಗಿ ಈ ತಂಡ ಚಿನ್ನ ಕಳ್ಳಸಾಗಣೆ ಮಾಡಿತ್ತು. ಅಧಿಕಾರಿಗಳು ಮತ್ತು ರಫೀಕ್ ನಡುವಿನ ವಹಿವಾಟಿನ ಬಗ್ಗೆಯೂ ಪೋಲೀಸರಿಗೆ ಮಾಹಿತಿ ಸಿಕ್ಕಿದೆ. ಇವರೊಂದಿಗೆ ಕೆಲಸ ಮಾಡಿದ ಕಸ್ಟಮ್ಸ್ ಅಧಿಕಾರಿಯ ಕುರಿತು ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಹೊರಬೀಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.