ನವದೆಹಲಿ: ಭಾರತವನ್ನು ವಿರೋಧಿಸುತ್ತಲೇ ಬರ್ಬಾದ್ ಆಗಿ ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿರುವ ಜನರಿರುವ ಪಾಕಿಸ್ತಾನದ ಸ್ಥಿತಿ ಯಾರಿಗೆ ತಾನೇ ಗೊತ್ತಿಲ್ಲ? ಆದರೆ ಮಧ್ಯಪ್ರಾಚ್ಯದಲ್ಲಿ ಮುಸ್ಲಿಂರೇ ಹೆಚ್ಚಾಗಿರುವ ದೇಶಗಳಲ್ಲಿ ಭಾರತೀಯ ಆಹಾರ ಉತ್ಪನ್ನಗಳಿಗೆ ಭಾರಿ ಬೇಡಿಕೆಯಿದೆ ಎಂದರೆ ನಂಬುತ್ತೀರಾ?
ಮಧ್ಯಪ್ರಾಚ್ಯಕ್ಕೆ ನಿಬಂಧನೆಗಳನ್ನು ಸಡಿಲಗೊಳಿಸಿ ಅಗತ್ಯ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಬೇಕು ಎಂದು ಯುಎಇ ಆಹಾರ ಉದ್ಯಮ ಭಾರತವನ್ನು ಕೇಳಿಕೊಂಡಿದೆ.
ಕೃಷಿ ಮತ್ತು ಸಂಸ್ಕರಿಸಿದ ಆಹಾರ ರಫ್ತು ಅಭಿವೃದ್ಧಿ ಪ್ರಾಧಿಕಾರ(ಎಪಿಇಡಿಎ) ಸಹಕಾರದಲ್ಲಿ ರಫ್ತು ಉತ್ತೇಜಿಸುವ ಪ್ರತಿಕ್ರಿಯೆಗಳು ನಡೆಯುವಂತೆ ನೋಡಿಕೊಳ್ಳಬೇಕು. ಬಹ್ರೇನ್, ಕುವೈತ್, ಸುಲ್ತಾನೇಟ್ ಆಫ್ ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಂತಹ ದೇಶಗಳಲ್ಲಿ ಆಹಾರ ಮತ್ತು ಆಹಾರ ಉತ್ಪನ್ನಗಳ ರಫ್ತು ಹೆಚ್ಚಿಸಲು ನವದೆಹಲಿ ಮುಂದೆ ಬರುತ್ತದೆ ಎಂಬ ನಂಬಿಕೆಯಿದೆ ಎಂದು ಯುಎಇ ಆಹಾರ ಉದ್ಯಮ ತಿಳಿಸಿದೆ.
ಯುಎಇಯಲ್ಲಿದ್ದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಕಳೆದ ವಾರ ಈ ಆಮದುದಾರರೊಂದಿಗೆ ವಿವರವಾದ ಚರ್ಚೆ ನಡೆಸಿದ್ದರು. ಮತ್ತು ಭಾರತದಿಂದ ರಫ್ತು ಹೆಚ್ಚಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದ್ದರು.
ಓಮನ್ ಮೂಲದ ಖಿಮ್ಜಿ ರಾಮದಾಸ್ ಗ್ರೂಪ್ನ ಪ್ರತಿನಿಧಿಯೊಬ್ಬರು ಭಾರತೀಯ ಬಾಸ್ಮತಿ ಅಕ್ಕಿಗೆ ಬೇಡಿಕೆಯಿದೆ. ಈ ಅಕ್ಕಿಯ ಮೇಲಿನ ಕನಿಷ್ಠ ರಫ್ತು ಬೆಲೆಯನ್ನು(ಎಂಇಪಿ) ಕಡಿತಗೊಳಿಸುವುದರಿಂದ ಭಾರತವು ರಫ್ತು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಪ್ರಸ್ತುತ ಪ್ರತಿ ಟನ್‌ಗೆ 1,200 ಡಾಲರ್‌ಗಳಿಂದ ಎಂಇಪಿಯನ್ನು 850 ಡಾಲರ್‌ಗೆ ಇಳಿಸಲು ಸರ್ಕಾರ ಪರಿಗಣಿಸುತ್ತಿದೆ. ಜಿಸಿಸಿ(ಗಲ್ಫ್ ಸಹಕಾರ ಮಂಡಳಿ) ದೇಶಗಳ ಆಮದುದಾರರು ಹಲಾಲ್ ಪ್ರಮಾಣೀಕರಿಸುವ ಸಮಸ್ಯೆಯನ್ನು ಎತ್ತಿದ್ದರು. ಭಾರತವು ಹಲಾಲ್ ಮಾಂಸ ಪ್ರಮಾಣೀಕರಣ ವ್ಯವಸ್ಥೆ ಹೊಂದಿದೆ. ಭಾರತ ಮತ್ತು ಯುಎಇ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ಮಾಂಸ ಉತ್ಪನ್ನಗಳ ರಫ್ತು ಉತ್ತೇಜಿಸಲು ಸಹಾಯ ಮಾಡುತ್ತಿದೆ ಎಂದು ಅಲನಾಸನ್ಸ್ ಪ್ರೈವೇಟ್ ಲಿಮಿಟೆಡ್ ಕಾರ್ಯನಿರ್ವಾಹಕ ನಿರ್ದೇಶಕ ಫೌಜಾನ್ ಅಲವಿ ಹೇಳಿದ್ದರು.
ಇದೇ ಸಂದರ್ಭದಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡ ಚೋಯಿತ್ರಮ್ಸ್ (ಚಿಲ್ಲರೆ ಉತ್ಪನ್ನಗಳ ಸಂಗ್ರಹಣೆ) ಮುಖ್ಯಸ್ಥ ಕೀರ್ತಿ ಮೇಘನಾನಿ, ಗುಣಮಟ್ಟದ ಜತೆ ಉತ್ಪನ್ನಗಳ ಪ್ಯಾಕೇಜಿಂಗ್ ಮೇಲೆ ಗಮನಹರಿಸುವುದರಿಂದ ಭಾರತೀಯ ರಫ್ತುದಾರರು ಯುಎಇ ಮತ್ತು ಇತರ ಗಲ್ಫ್ ಪ್ರದೇಶದ ರಾಷ್ಟ್ರಗಳೊಂದಿಗೆ ವ್ಯಾಪಾರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಆಪ್‌ಕಾರ್ಪ್ ಹೋಲ್ಡಿಂಗ್ ಅಧ್ಯಕ್ಷ ನಿತೇಶ್ ವೇದ್ ಮಾತನಾಡಿ, ಇಲ್ಲಿ ಎಪಿಇಡಿಎ ಕಚೇರಿ ಸ್ಥಾಪಿಸುವುದರಿಂದ ಆಹಾರ ಉದ್ಯಮಕ್ಕೆ ಸಹಾಯವಾಗುತ್ತದೆ. ಗುಡಿ ಕೈಗಾರಿಕೆ ಉತ್ಪನ್ನಗಳಿಗೆ ಬೇಡಿಕೆಯಿದ್ದು, ಭಾರತವು ಮಾನದಂಡಗಳು, ಪ್ಯಾಕೇಜಿಂಗ್ ಮತ್ತು ಲೇಬಲಿಂಗ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಬೇಕಿದೆ ಎಂದು ಹೇಳಿದರು.
ಭಾರತ-ಯುಎಇ ವ್ಯಾಪಾರ ಒಪ್ಪಂದವನ್ನು ಕಳೆದ ವರ್ಷ ಮೇ ತಿಂಗಳಲ್ಲಿ ಜಾರಿಗೆ ತರಲಾಗಿತ್ತು. ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವು 2021-22ರಲ್ಲಿ $72.9 ಶತಕೋಟಿಯಿಂದ 2022-23ರಲ್ಲಿ $84.9 ಶತಕೋಟಿಗೆ ಏರಿಕೆಯಾಗಿದೆ.