ಕುಂಬಳೆ: ಇತಿಹಾಸ ಪ್ರಸಿದ್ದ ಕುಂಬಳೆ ಸಮೀಪದ ಮುಜುಂಗಾವು ಶ್ರೀಪಾರ್ಥಸಾರಥಿ ಗೋಪಾಲಕೃಷ್ಣ ದೇವಾಲಯದಲ್ಲಿ ಕಾವೇರಿ ಸಂಕ್ರಮಣದ ಪ್ರಯುಕ್ತ ವಾರ್ಷಿಕ ತೀರ್ಥ ಸ್ನಾನ ಇಂದು ನಡೆಯಲಿದೆ.
ಮುಂಜಾನೆ ಸೂರ್ಯೋದಯದ ವೇಳೆ ಪವಿತ್ರ ಕೆರೆಯಿಂದ ಜಲ ಸಂಗ್ರಹಿಸಿ ಶ್ರೀದೇವರಿಗೆ ಅಭಿಷೇಕಗೈಯ್ಯುವ ಮೂಲಕ ತೀರ್ಥಸ್ನಾನ ಆರಂಭಗೊಳ್ಳಲಿದೆ. ಚರ್ಮರೋಗ ನಿವಾರಣೆಯಲ್ಲಿ ಪರಿಣಾಮಕಾರಿಯಾಗಿರುವ ಇಲ್ಲಿಯ ತೀರ್ಥಸ್ನಾನ ಸೇವೆಯ ಭಾಗವಾಗಲು ನಾಡಿನ ಉದ್ದಗಲದಿಂದ ಸಹಸ್ರಾರು ಜನರು ಆಗಮಿಸಿ ಭಾಗವಹಿಸುವುದು ವಾಡಿಕೆ. ಸಂಜೆವರೆಗೂ ಆಗಮಿಸುವ ಭಕ್ತರು ತೀರ್ಥಸ್ನಾನಗೈದು ಅನ್ನಪ್ರಸಾದ ಸ್ವೀಕರಿಸಿ ಕೃತಾರ್ಥರಾಗುತ್ತಾರೆ.
ಮುಂಜಾನೆ 4 ಗಂಟೆಗೆ ಕ್ಷೇತ್ರದ ಅರ್ಚಕರು ಬೆಳ್ಳಿ ಕಲಶದಲ್ಲಿ ಕೆರೆಯಿಂದ ತೀರ್ಥವನ್ನು ವಾದ್ಯಘೋಷಗಳ ಮೆರವಣಿಗೆಯಲ್ಲಿ ತಂದು ಶ್ರೀದೇವರಿಗೆ ಅಭಿಷೇಕ ಮಾಡಿದರು. ನಂತರ ತೀರ್ಥಸ್ನಾನದಲ್ಲಿ ಭಕ್ತರು ಭಾಗವಹಿಸಿದರು.
ತಮ್ಮ ಮನೆಯಲ್ಲಿ ಮಿಂದು ಶುಚಿರ್ಭೂತರಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ, ದೇವಸ್ಥಾನದ ಮುಂಭಾಗದ ಕೆರೆಯಲ್ಲಿ ಸ್ನಾನ ಮಾಡಿ, ಹುರುಳಿ ಮತ್ತು ಬೆಳ್ತಿಗೆ ಅಕ್ಕಿ ಮಿಶ್ರಣವನ್ನು ಕೆರೆಗೆ ಹಾಕುತ್ತಾ ಪ್ರದಕ್ಷಿಣೆ ಬಂದು ದೇವಸ್ಥಾನದ ಗೋಪುರದಲ್ಲಿ ಇಟ್ಟಿರುವ ಕೊಪ್ಪರಿಗೆಯಲ್ಲಿ ಹಾಕಿದ ಭಕ್ತಾದಿಗಳು ಪಾವನರಾದರು.
ಕೆರೆಯಲ್ಲಿ ಅಕ್ಕಿ, ಹುರುಳಿಗಳನ್ನು ಸಮರ್ಪಿಸಿ ಸ್ನಾನ ಮಾಡುವುದರಿಂದ ಚರ್ಮರೋಗಗಳು ಗುಣಮುಖವಾಗುತ್ತದೆ ಎಂಬುದು ಭಕ್ತ ಜನರ ನಂಬಿಕೆಯಿಂದ ವರ್ಷದಿಂದ ವರ್ಷಕ್ಕೆ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಡು ಬೇಸಿಗೆಯಲ್ಲೂ ಈ ಕೆರೆಯಲ್ಲಿ ನೀರು ತುಂಬಿರುವುದು ಇಲ್ಲಿನ ವಿಶೇಷವಾಗಿದೆ.