ಜೆರುಸಲೇಂ: ಇಸ್ರೇಲ್‌ನ ದಕ್ಷಿಣ ಭಾಗದಲ್ಲಿ ಹಮಾಸ್ ಬಂಡುಕೋರರು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಇಸ್ರೇಲ್‌ಗೆ ರಕ್ಷಣಾ ನೆರವು ರವಾನಿಸಿದ್ದಾರೆ.
ಅಮೆರಿಕದ ಶಸ್ತ್ರಾಸ್ತ್ರಗಳನ್ನು ಹೊತ್ತ ಮೊದಲ ವಿಮಾನವು ಮಂಗಳವಾರ ಸಂಜೆ ದಕ್ಷಿಣ ಇಸ್ರೇಲ್‌ಗೆ ಬಂದಿಳಿದಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ತಿಳಿಸಿದೆ.
'ಯುಎಸ್ ಶಸ್ತ್ರಾಸ್ತ್ರಗಳನ್ನು ಹೊತ್ತ ಮೊದಲ ವಿಮಾನವು ಇಂದು ಸಂಜೆ ದಕ್ಷಿಣ ಇಸ್ರೇಲ್‌ನ ನೆವಾಟಿಮ್ ವಾಯುನೆಲೆಗೆ ಆಗಮಿಸಿದೆ' ಎಂದು ಐಡಿಎಫ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ. ಆದರೆ, ಅಮೆರಿಕದಿಂದ ಯಾವೆಲ್ಲಾ ಶಸ್ತ್ರಾಸ್ತ್ರಗಳು ಅಥವಾ ಮಿಲಿಟರಿ ಉಪಕರಣಗಳನ್ನು ಸ್ವೀಕರಿಸಲಾಗಿದೆ ಎಂಬುದನ್ನು ಬಹಿರಂಗಪಡಿಸಿಲ್ಲ.
'ನಮ್ಮ ಸೇನಾಪಡೆಗಳ ನಡುವಿನ ಸಹಕಾರವು ಯುದ್ಧದ ಸಮಯದಲ್ಲಿ ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಯನ್ನು ಖಾತ್ರಿಪಡಿಸುವ ಪ್ರಮುಖ ಭಾಗವಾಗಿದೆ' ಎಂದು ಐಡಿಎಫ್ ತಿಳಿಸಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಅವರು ಮಂಗಳವಾರ ಮೂರನೇ ಬಾರಿ ಅಮೆರಿಕ ಅಧ್ಯಕ್ಷ ಬೈಡೆನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ.
ಹಮಾಸ್ ಐಸಿಸ್‌ಗಿಂತ ಕೆಟ್ಟದಾಗಿದ್ದು, ಹಮಾಸ್ ಬಂಡುಕೋರರನ್ನು ಐಸಿಸ್ ರೀತಿಯಲ್ಲೇ ನಡೆಸಿಕೊಳ್ಳಬೇಕು ಎಂದು ನಾನು ಅವರಿಗೆ (ಬೈಡೆನ್) ಹೇಳಿದ್ದೇನೆ ಎಂದು ನೆತನ್ಯಾಹು ತಿಳಿಸಿದ್ದಾರೆ.
ಅಮೆರಿಕವು ಇಸ್ರೇಲ್ ಬೆಂಬಲಕ್ಕೆ ನಿಂತಿದೆ. ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಪುನರುಚ್ಚರಿಸಿದ ಬೈಡನ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ನೆತನ್ಯಾಹು ಹೇಳಿದ್ದಾರೆ.
ಗಾಜಾ ಗಡಿಯನ್ನು ಬಹುತೇಕ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಇಸ್ರೇಲ್ ಹೇಳಿದೆ. ಅಲ್ಲದೆ, ಗಾಜಾ ಗಡಿಗೆ ಸನಿಹದ ಪಟ್ಟಣಗಳಲ್ಲಿ 1,500 ಹಮಾಸ್ ಬಂಡುಕೋರರ ಮೃತದೇಹಗಳು ಪತ್ತೆಯಾಗಿವೆ ಎಂದು ಹೇಳಿಕೊಂಡಿದೆ. ಗಾಜಾ ಗಡಿಗೆ ಹತ್ತಿರದಲ್ಲಿರುವ ಪಟ್ಟಣಗಳಲ್ಲಿರುವ ಜನರನ್ನು ಇಸ್ರೇಲ್ ತೆರವುಗೊಳಿಸುತ್ತಿದೆ.
ಹಮಾಸ್ ಬಂಡುಕೋರರು ಶನಿವಾರ ನಡೆಸಿದ ದಾಳಿಯ ನಂತರ ಆರಂಭವಾದ ಇಸ್ರೇಲ್‌ನ ಸೇನಾ ಕಾರ್ಯಾಚರಣೆಯು 'ಹಮಾಸ್ ಸಂಘಟನೆಯನ್ನು ನಾಶಪಡಿಸುವ ಹಾಗೂ ಮಧ್ಯಪ್ರಾಚ್ಯವನ್ನು ಬದಲಾಯಿಸುವ ಯುದ್ಧದ ಆರಂಭ ಮಾತ್ರ' ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಹಮಾಸ್ ನಡೆಸಿದ ದಾಳಿಯಲ್ಲಿ ಇಸ್ರೇಲ್‌ನಲ್ಲಿ ಸಾವನ್ನಪ್ಪಿರುವ ಜನರ ಸಂಖ್ಯೆಯು 900ಕ್ಕಿಂತ ಹೆಚ್ಚಾಗಿದೆ. ಗಾಜಾದಲ್ಲಿ ಇದುವರೆಗೆ 687 ಜನ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಗಾಜಾ ಪಟ್ಟಿಯ ಪೂರ್ವ ಗಡಿಯ ಬಳಿ ಒಂದೇ ಸ್ಥಳದಲ್ಲಿ ಹಮಾಸ್ ಬಂಡುಕೋರರು 100ಕ್ಕೂ ಹೆಚ್ಚು ಮಂದಿಯನ್ನು ಕೊಂದಿದ್ದಾರೆ.