ನವದೆಹಲಿ: 'ಚಂದ್ರಯಾನ-3' ಮತ್ತು 'ಆದಿತ್ಯ ಎಲ್-1' ಯಶಸ್ವಿ ಉಡ್ಡಯನದ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಮೈಲಿಗಲ್ಲು ಸಾಧಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ), ದೇಶದ ಮೊದಲ ಮಾನವಸಹಿತ 'ಗಗನಯಾನ'ಕ್ಕೆ ಭರದ ಸಿದ್ದತೆ ಮಾಡಿಕೊಳ್ಳುತ್ತಿದೆ.

ಇದರ ಭಾಗವಾಗಿ 'ಗಗನಯಾನ ಯೋಜನೆ' ನೌಕೆಯ ಚಿತ್ರಗಳನ್ನು ಬಿಡುಗಡೆ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಇಸ್ರೊ, 'ಗಗನಯಾನ ಯೋಜನೆ ಭಾಗವಾಗಿ ಪರೀಕ್ಷಾರ್ಥ ಹಾರಾಟ (ಮಾನವರಹಿತವಾಗಿ) ನಡೆಸಲು ಪ್ರಾರಂಭಿಸಲಾಗಿದೆ. ಮೊದಲ ಪರೀಕ್ಷಾರ್ಥ ಉಡಾವಣಾ ವಾಹನ ಟಿವಿ- ಡಿ1 ಅನ್ನು ಪರಿಶೀಲಿಸಲಾಗುತ್ತಿದೆ. ಇದು ಗಗನಯಾನಿಗಳು ನೌಕೆಯಿಂದ ಹೊರಬರುವ ವ್ಯವಸ್ಥೆಯ (ಕ್ರಿವ್ ಎಸ್ಕೇಪ್ ಸಿಸ್ಟಮ್) ಕಾರ್ಯಕ್ಷಮತೆಯನ್ನು ಪರಿಶೀಲಿಸಲು ನೆರವಾಗುತ್ತದೆ' ಎಂದು ಹೇಳಿದೆ.
ಮುಂದಿನ ವರ್ಷ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಾನವಸಹಿತ ನೌಕೆಯನ್ನು ಉಡ್ಡಯನ ಮಾಡಲು ಇಸ್ರೊ ಯೋಜಿಸಿದೆ. ಮೂವರು ಗಗನಯಾತ್ರಿಗಳನ್ನು ಹೊತ್ತ ನೌಕೆಯನ್ನು ಭೂಮಿಯಿಂದ 400 ಕಿ.ಮೀ. ಅಂತರದ ಕೆಳ ಕಕ್ಷೆಗೆ ಕಳುಹಿಸಲಾಗುತ್ತದೆ. 3-4 ದಿನಗಳ ಕಾಲ ನೌಕೆಯು ಈ ಕಕ್ಷೆಯಲ್ಲಿ ಪರಿಭ್ರಮಿಸಲಿದೆ.
ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೊದಲು ನಾಲ್ಕು ಬಾರಿ (ಟಿವಿ-ಡಿ1,ಟಿವಿ-ಡಿ2, ಟಿವಿ-ಡಿ3, ಟಿವಿ-ಡಿ4) ಪರೀಕ್ಷಾರ್ಥ ಉಡಾವಣೆ ನಡೆಸಲು ಇಸ್ರೋ ಯೋಜಿಸಿದೆ.