ನವದೆಹಲಿ: ಈ ಕಾಮರ್ಸ್ ದೈತ್ಯ ಅಮೆಜಾನ್ ಉದ್ಯೋಗಿಗಳಿಗೆ ಎಚ್ಚರಿಕೆ ಜಾರಿ ಮಾಡಿದೆ. ರಿಟರ್ನ್ ಟು ಆಫೀಸ್ ನಿಯಮ ಪಾಲಿಸದ ಉದ್ಯೋಗಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದೆ. ಸಮಸ್ಯೆ ಕಠಿಣವಾಗಿರುವುದನ್ನು ಮನಗಂಡು ಲೇಆಫ್ಸ್ ಪ್ರಕಟಿಸುವುದಾಗಿ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳಿಗೆ ಇತ್ತೀಚೆಗೆ ರಿಟರ್ನ್ ಟು ಆಫೀಸ್ ನಿಯಮ ಜಾರಿಗೊಳಿಸಿತ್ತು. ಅದರಂತೆ ಉದ್ಯೋಗಿಗಳು ವಾರಕ್ಕೆ ಮೂರು ದಿನ ಕಚೇರಿಗೆ ಬಂದು ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಆದರೆ ಸುದೀರ್ಘ ಕಾಲದಿಂದ ಮನೆಯಲ್ಲೇ ಉಳಿದುಕೊಂಡಿದ್ದ ಉದ್ಯೋಗಿಗಳು ಕಚೇರಿಗೆ ಬರಲು ಒಪ್ಪಿಕೊಳ್ಳುತ್ತಿಲ್ಲ. ಇದನ್ನು ಗಮನಿಸಿದ ಆಡಳಿತ ವಾರಕ್ಕೆ ಮೂರು ದಿನ ಸಹ ಕಚೇರಿಗೆ ಬಾರದಿದ್ದರೆ ಹೇಗೆ ಎಂದು ಪ್ರಶ್ನಿಸಿತ್ತು.
ಅಷ್ಟೇ ಅಲ್ಲ, ಇದನ್ನು ಅನುಸರಿಸದ ಉದ್ಯೋಗಿಗಳನ್ನು ವಜಾ ಮಾಡುವ ಹಕ್ಕನ್ನು ಮ್ಯಾನೇಜರ್‌ಗಳಿಗೆ ನೀನೀಡಿದೆ. ಕೆಲಸಗಾರರ ವಜಾ ಬಗ್ಗೆ ಇಂಟರ್ನಲ್ ವರ್ಕ್ಫೋರ್ಸ್ ಗೆ ಸಮಾಚಾರ ತಲುಪಿಸುವ ಆಂತರಿಕ ಪೋರ್ಟಲ್ನಲ್ಲಿ ನೋಟೀಸ್ ಹಾಕುವ ಮೂಲಕ ತಿಳಿಸಲಾಗಿದೆ ಎನ್ನಲಾಗುತ್ತಿದೆ. ಈ ನೋಟೀಸ್ ಗಳಲ್ಲಿ 'ನಮ್ಮ ಯಾವುದೇ ನೀತಿಗಳಂತೆಯೇ, ಇದನ್ನೂ ನಮ್ಮ ತಂಡವು ಅನುಸರಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಯಾರಾದರೂ ನಿರ್ಲಕ್ಷಿಸಲು ನಿರ್ಧರಿಸಿದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಎಚ್ಚರಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಪ್ರಕ್ರಿಯೆಯು ಮ್ಯಾನೇಜರ್ ಮತ್ತು ಉದ್ಯೋಗಿಯ ನಡುವಿನ ಖಾಸಗಿ ಸಂಭಾಷಣೆಯೊಂದಿಗೆ ಪ್ರಾರಂಭವಾಗುತ್ತದೆ, ಈ ಸಮಯದಲ್ಲಿ ವ್ಯವಸ್ಥಾಪಕರು ಸಕಾರಾತ್ಮಕ ಉದ್ದೇಶ ಹೊಂದಿ ಉದ್ಯೋಗಿಯ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಒಂದೆರಡು ವಾರದಲ್ಲಿ ಉದ್ಯೋಗಿ ಕಚೇರಿಗೆ ಬರುವಂತೆ ಮಾಡಬೇಕು. ಅದಾದ ಬಳಿಕವೂ ನಿರಾಕರಿಸಿದರೆ ಮ್ಯಾನೇಜರ್ಗಳು ಮತ್ತೆ ಅವರ ಜತೆ ಸಮಾವೇಶ ನಡೆಸಬೇಕು. ಇದಾದ ಬಳಿಕ ವಾರಕ್ಕೆ ಮೂರು ಅಥವಾ ಅದಕ್ಕಿಂತ ಹೆಚ್ಚು ದಿನ ಕಚೇರಿಗೆ ಬರುವಂತೆ ಮಾಡಬೇಕು. ಇದಾಗಿಯೂ ಉದ್ಯೋಗಿ ಬದಲಾಗದಿದ್ದರೆ ಇಮೇಲ್‌ನಲ್ಲಿ ನೋಟಿಸ್ ನೀಡಿ ಕಡೆಯದಾಗಿ ಕಠಿಣ ಕ್ರಮ ಕೈಗೊಂಡು ಮಾನವ ಸಂಪನ್ಮೂಲ ಶಾಖೆಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದೆ.