ತಿರುವನಂತಪುರ: ಕೇರಳದ ವಯನಾಡಿನ ಕಂಬಮಲ ಅರಣ್ಯ ವಲಯದಲ್ಲಿ ಮಾವೋವಾದಿಗಳು ಇರುವ ಬಗ್ಗೆ ಸತತ ಮಾಹಿತಿ ಬರುತ್ತಿದ್ದು, ಹೀಗಾಗಿ ಅಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಸಿಪಿಐನ (ಮಾವೋವಾದಿ) ಸದಸ್ಯರು ಎಂದು ಹೇಳಿಕೊಂಡು ಶಸ್ತ್ರಸಜ್ಜಿತ ಆರು ಮಂದಿಯ ಗುಂಪು ಕಂಬಮಲ ಅರಣ್ಯ ಸಮೀಪ ಇರುವ ಕಬನಿ ಪ್ರದೇಶದಲ್ಲಿ ರೆಸಾರ್ಟ್‌ಗೆ ಬುಧವಾರ ರಾತ್ರಿ ಬಂದಿದ್ದಾರೆ.
ಆಡಳಿತರೂಢ ಪಕ್ಷಗಳು ಕೃಷಿ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುತ್ತಿವೆ. ಮಾವೋವಾದಿಗಳ ವಿರುದ್ಧ ದಾರಿ ತಪ್ಪಿಸುವ ಪ್ರಚಾರಗಳನ್ನು ನಡೆಸುತ್ತಿವೆ ಎಂದು ಅವರು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ. ಅವರ ಬಳಿ ಆಧುನಿಕ ಶಸ್ತ್ರಾಸ್ತ್ರಗಳು ಇದ್ದವು ಎಂದು ಹೇಳಲಾಗಿದೆ.
ಸೆ. 28ರಂದು ಆರು ಮಂದಿಯ ಗುಂಪು, ಕಂಬಮಲ ಎಸ್ಟೇಟ್‌ನಲ್ಲಿರುವ ಕೇರಳ ಅರಣ್ಯ ಅಭಿವೃದ್ಧಿ ನಿಗಮದ ಕಚೇರಿ ಮೇಲೆ ದಾಳಿ ನಡೆಸಿತ್ತು. ಬಳಿಕ ಮಾವೋವಾದಿಗಳ ಪತ್ತೆಗೆಂದು ಪೊಲೀಸರು ಇರಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳು ಹಾನಿಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.
ಇತ್ತೀಚೆಗೆ ಈ ಪ್ರದೇಶದಲ್ಲಿ ಮಾವೋವಾದಿಗಳು ಇರುವ ಬಗ್ಗೆ ಮೂರು ನಿದರ್ಶನಗಳು ವರದಿಯಾಗಿವೆ. ಪೊಲೀಸರ ಒಂದು ತಂಡ ಈ ಪ್ರದೇಶದಲ್ಲಿ ಕೂಂಬಿಂಗ್ ನಡೆಸುತ್ತಿದೆ.
ರಾಜ್ಯ ಪೊಲೀಸ್‌ನ ವಿಶೇಷ ಘಟಕ, ಕರ್ನಾಟಕ ಹಾಗೂ ತಮಿಳುನಾಡು ಪೊಲೀಸರ ಸಹಕಾರದೊಂದಿಗೆ ಕೂಂಬಿಂಗ್ ನಡೆಸುತ್ತಿದೆ. ಡ್ರೋನ್ ಬಳಸಿ ವೈಮಾನಿಕ ಕಣ್ಗಾವಲು ಕೂಡ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.