ತಿರುವನಂತಪುರಂ: ಕಾಂಗ್ರೆಸ್ 'ಕುಟುಂಬ ನಿಯಂತ್ರಿತ' ಪಕ್ಷವಾಗಿರುವುದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗೆದ್ದರೆ ರಾಹುಲ್ ಗಾಂಧಿ ಪ್ರಧಾನಿಯಾಗಬಹುದು ಎಂದು ಕಾಂಗ್ರೆಸ್ ಸಂಸದ ಹಾಗೂ ಹಿರಿಯ ನಾಯಕ ಶಶಿ ತರೂರ್ ಹೇಳಿದ್ದಾರೆ.
ತಿರುವನಂತಪುರಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸೋಮವಾರ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಪ್ರಧಾನಿ ಅಭ್ಯರ್ಥಿಯಾಗಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಹಲವು ರೀತಿಯಲ್ಲಿ 'ಕುಟುಂಬ ನಡೆಸುವ' ಪಕ್ಷವಾಗಿರುವುದರಿಂದ ರಾಹುಲ್ ಗಾಂಧಿ ಪ್ರಧಾನಿಯಾಗಬಹುದು ಎಂದು ಹೇಳಿದ್ದಾರೆ.
ಸೋಮವಾರ ತಿರುವನಂತಪುರಂನ ಟೆಕ್ನೋಪಾರ್ಕ್ 3ನೇ ಹಂತದಲ್ಲಿ ಅಮೆರಿಕ ಮೂಲದ ಸಿಲಿಕಾನ್ ವ್ಯಾಲಿ ಕಂಪನಿಯ ಹೊಸ ಕಚೇರಿಯನ್ನು ಉದ್ಘಾಟಿಸಿದ ಶಶಿ ತರೂರ್, ಕಾಂಗ್ರೆಸ್ ಅಧ್ಯಕ್ಷ ಮಲಿಕಾರ್ಜುನ್ ಖರ್ಗೆ ಅಥವಾ ರಾಹುಲ್ ಗಾಂಧಿ ಅವರು ಕಾಂಗ್ರೆಸ್‌ನಿಂದ ಪ್ರಧಾನಿಯಾಗಬಹುದು ಎಂದು ಹೇಳಿದರು.
ಮಿಜೋರಾಂನ ಐಜ್ವಾಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ಇದೇ ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆಗಿ ಕಟುವಾಗಿಯೇ ಉತ್ತರ ನೀಡಿದ್ದ ರಾಹುಲ್ ಗಾಂಧಿ, "ಅಮಿತ್ ಶಾ ಅವರ ಮಗ ನಿಖರವಾಗಿ ಏನು ಮಾಡುತ್ತಿದ್ದಾರೆ? ರಾಜನಾಥ್ ಸಿಂಗ್ ಅವರ ಮಗ ಏನು ಮಾಡುತ್ತಾರೆ? ಅಮಿತ್ ಶಾ ಅವರ ಮಗ ಭಾರತೀಯ ಕ್ರಿಕೆಟ್ ನಡೆಸುತ್ತಿದ್ದಾರೆ. ಅನುರಾಗ್ ಠಾಕೂರ್ ಅವರಂತಹ ಅವರ (ಬಿಜೆಪಿ) ಅನೇಕ ಮಕ್ಕಳು ರಾಜವಂಶಸ್ಥರು" ಎಂದು ರಾಹುಲ್ ಗಾಂಧಿ ಹೇಳಿದರು.
ವಿವಾದವಾಗುತ್ತಲೇ ಸ್ಪಷ್ಟನೆಶಶಿತರೂರ್ ಅವರ ಈ ಹೇಳಿಕೆಗೆ ಕಾಂಗ್ರೆಸ್ ಪಕ್ಷದಲ್ಲೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಲೇ ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿರುವ ಅವರು, 'ನಾನು ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾಡಿದ ಹೇಳಿಕೆಯು ಸಾರ್ವಜನಿಕ ಬಳಕೆಗಾಗಿ ರಚಿಸಲಾದ ಔಪಚಾರಿಕ ಹೇಳಿಕೆಯಲ್ಲ. ನನ್ನ ಹೇಳಿಕೆಯನ್ನು ಸಾಮಾನ್ಯ ಜನರಿಂದ ತಪ್ಪಾಗಿ ನಿರೂಪಿಸಲಾಗುತ್ತಿದೆ. ಹೌದು, ನೆಹರೂ/ಗಾಂಧಿ ಕುಟುಂಬದ ಡಿಎನ್‌ಎ ಮತ್ತು ಕಾಂಗ್ರೆಸ್ ಪಕ್ಷದೊಂದಿಗೆ ಬೇರ್ಪಡಿಸಲಾಗದಂತೆ ನಂಟು ಇದೆ ಎಂದು ನಾನು ಆಗಾಗ ಹೇಳುತ್ತಲೇ ಬಂದಿದ್ದೇನೆ. ಕುಟುಂಬವೇ ಪಕ್ಷದ ಶಕ್ತಿ. ನಾನು ಹೇಳದೆ ಬಿಟ್ಟಿರುವುದು ರಾಹುಲ್ ಗಾಂಧಿ ಅವರೇ ಪಕ್ಷದ ಆಯ್ಕೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ. ಪಕ್ಷದೊಳಗಿನ ಯಾವುದೇ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಅಗಾಧ ಆಯ್ಕೆ ಅವರೇ ಆಗಿದ್ದಾರೆ ಎಂದು ಹೇಳಿದ್ದಾರೆ.