ನವದೆಹಲಿ: ಕೆನಡಾ- ಭಾರತ ನಡುವೆ ಏರ್ಪಟ್ಟಿರುವ ರಾಜತಾಂತ್ರಿಕ ಬಿಕ್ಕಟ್ಟು ಭಾರತ- ಅಮೆರಿಕ ಸಂಬಂಧದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಭಾರತದ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಮತ್ತು ಅವರ ತಂಡ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿತ್ತು. ಈ ವರದಿಗಳನ್ನು ಅಮೆರಿಕ ರಾಯಭಾರ ಕಚೇರಿಯು ಗುರುವಾರ ತಳ್ಳಿಹಾಕಿದೆ.
ಅಮೆರಿಕದ 'ದಿ ಪೊಲಿಟಿಕೊ' ಎಂಬ ಪತ್ರಿಕೆಯು ಈ ಕುರಿತು ವರದಿ ಮಾಡಿತ್ತು. ಭಾರತದ ಅಧಿಕಾರಿಗಳ ಜೊತೆ ಅಮೆರಿಕವು ಅನಿಶ್ಚಿತ ಅವಧಿಯವರೆಗೆ ಸಂವಹನವನ್ನು ಕಡಿಮೆ ಮಾಡಿಕೊಳ್ಳಬೇಕಾಗುತ್ತದೆ ಎಂದೂ ಗಾರ್ಸೆಟ್ಟಿ ಅವರು ಹೇಳಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಅಮೆರಿಕ ರಾಯಭಾರ ಕಚೇರಿಯು ಈ ವರದಿಗಳನ್ನು ತಳ್ಳಿಹಾಕಿದೆ. 'ಅಮೆರಿಕದ ಜನರು ಮತ್ತು ಸರ್ಕಾರವು ಭಾರತ ಜೊತೆ ಹೊಂದಿರುವ ಸಂಬಂಧವನ್ನು ಮತ್ತಷ್ಟು ಗಾಢಗೊಳಿಸುವ ದಿಸೆಯಲ್ಲಿ ಗಾರ್ಸೆಟ್ಟಿ ಅವರು ಕೆಲಸ ಮಾಡುತ್ತಿದ್ದಾರೆ' ಎಂದು ಅಮೆರಿಕ ರಾಯಭಾರ ಕಚೇರಿಯ ವಕ್ತಾರರು ಹೇಳಿದ್ದಾರೆ.
'ಭಾರತದ ಜೊತೆ ನಾವು ಹೊಂದಿರುವ ಮಹತ್ವಪೂರ್ಣ ಸಹಭಾಗಿತ್ವವನ್ನು ವೃದ್ಧಿಸುವ ನಿಟ್ಟಿನಲ್ಲಿ ಗಾರ್ಸೆಟ್ಟಿ ಮತ್ತು ಅಮೆರಿಕ ರಾಯಭಾರ ಕಚೇರಿಯು ಪ್ರತಿದಿನ ಶ್ರಮಿಸುತ್ತಿದೆ. ರಾಜತಾಂತ್ರಿಕ ವಿಚಾರವಾಗಿ ವೈಯಕ್ತಿಕವಾಗಿ ತೊಡಗಿಕೊಳ್ಳುವುದು ಮತ್ತು ಅವರ ಸಾರ್ವಜನಿಕ ಕಾರ್ಯಕ್ರಮಗಳು ಗಾರ್ಸೆಟ್ಟಿ ಅವರ ಶ್ರಮಕ್ಕೆ ಸಾಕ್ಷಿಯಾಗಿದೆ' ಎಂದು ವಕ್ತಾರರು ಹೇಳಿದ್ದಾರೆ.
ಕೆನಡಾ ಪ್ರಜೆ, ಖಾಲಿಸ್ತಾನ ಪರ ಹೋರಾಟಗಾರ ಹರದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಆರೋಪ ಮಾಡಿದ್ದರು. ಆ ನಂತರ ಭಾರತ- ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧದಲ್ಲಿ ಬಿರುಕು ಮೂಡಿದೆ. ಈ ಹಿನ್ನೆಲೆಯಲ್ಲಿ ದಿ ಪೊಲಿಟಿಕೊ ವರದಿ ಮಾಡಿದೆ.