ಕಾಸರಗೋಡು: ಮುಖ್ಯಮಂತ್ರಿ ಮತ್ತು ಸಚಿವರ ನೇತೃತ್ವದ ನವ ಕೇರಳ ಸಮಾವೇಶ ಎಲ್ಲರನ್ನೂ ಒಳಗೊಂಡ ಬೃಹತ್ ಸಮಾವೇಶವಾಗಲಿದೆ ಎಂದು ಬಂದರು, ಪುರಾತತ್ವ, ಇತಿಹಾಸ ಮತ್ತು ವಸ್ತುಸಂಗ್ರಹಾಲಯಗಳ ಸಚಿವ ಅಹಮ್ಮದ್ ದೇವರ್ಕೋವಿಲ್ ಹೇಳಿದರು.
ಚೆರುವತ್ತೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ತೃಕರಿಪುರ ಕ್ಷೇತ್ರದ ನವಕೇರಳ ಸಮಾವೇಶದ ಪರಿಶೀಲನಾ ಸಭೆಯನ್ನು ಸಚಿವರು ಸೋಮವಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ನವ ಕೇರಳ ಸಮಾವೇಶ ಎಂಬುದು ಸರ್ಕಾರಿ ಕಾರ್ಯಕ್ರಮವಾಗಿದ್ದು, ಧರ್ಮ, ಜಾತಿ, ಭೇದವಿಲ್ಲದೆ ಎಲ್ಲರೂ ಒಂದಾಗಬಹುದು. ಜನರ ಅಭಿಪ್ರಾಯಗಳನ್ನು ಸ್ವೀಕರಿಸಲು ಸಚಿವರು ಆಗಮಿಸುವ ಕಾರ್ಯಕ್ರಮ ಇದಾಗಿದೆ. ಇದರಿಂದ ಯಾರನ್ನೂ ಹೊರಗಿಡುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸಚಿವರು ತಿಳಿಸಿದರು.
ಶಾಸಕ ಎಂ ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ನ.19 ರಂದು ಸಂಜೆ 6 ಗಂಟೆಗೆ ಕಾಲಿಕಡವ್ ಮೈದಾನದಲ್ಲಿ ನಡೆಯುವ ನವಕೇರಳ ಸಮಾವೇಶದಲ್ಲಿ ಕ್ಷೇತ್ರದ ವಿವಿಧೆಡೆಯಿಂದ 15000 ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಶಾಸಕರು ತಿಳಿಸಿದರು. ಭದ್ರತಾ ವ್ಯವಸ್ಥೆ ಹಾಗೂ ವಾಹನ ನಿಲುಗಡೆ ವ್ಯವಸ್ಥೆಯನ್ನು ಸೂಕ್ತ ರೀತಿಯಲ್ಲಿ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ಕೆ.ಇನ್ಬಾ ಶೇಖರ್ ಅವರು ಪೋಲೀಸರಿಗೆ ಸೂಚನೆ ನೀಡಿದರು. ಸ್ಥಳೀಯಾಡಳಿತ ಇಲಾಖೆ ಜಂಟಿ ನಿರ್ದೇಶಕ ಮಂಡಲ ಸಂಘಟನಾ ಸಮಿತಿ ಸಂಚಾಲಕ ಜೇಸನ್ ಮ್ಯಾಥ್ಯೂ, ಕಾಞಂಗಾಡ್ ಡಿವೈಎಸ್ಪಿ ಪಿ.ಬಾಲಕೃಷ್ಣನ್ ನಾಯರ್, ನೀಲೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಾಧವನ್ ಮಣಿಯೆರ ಮಾತನಾಡಿದರು. ಪ್ರಚಾರ ಸಂಚಾಲಕ, ಜಿಲ್ಲಾ ವಾರ್ತಾ ಅಧಿಕಾರಿ ಎಂ. ಮಧುಸೂದನನ್ ಪ್ರಚಾರ ಕಾರ್ಯಕ್ರಮಗಳ ಕುರಿತು ಹಾಗೂ ಲೋಕೋಪಯೋಗಿ ಭವನ ಇಲಾಖೆ ಕಾರ್ಯಪಾಲಕ ಅಭಿಯಂತರ ಕೆ.ಸಜಿತ್ ಕುಮಾರ್ ವೇದಿಕೆ ಅಲಂಕಾರ ಸಿದ್ಧತೆ ಕುರಿತು, ಯುವ ಕಲ್ಯಾಣ ಮಂಡಳಿ ಜಿಲ್ಲಾ ಸಂಯೋಜಕ ಎ.ವಿ. ಶಿವಪ್ರಸಾದ್ ಸ್ವಯಂಸೇವಕ ವ್ಯವಸ್ಥೆಗಳ ಬಗ್ಗೆ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಾಧವನ್ ಮಣಿಯೇರ, ನೀಲೇಶ್ವರ ನಗರಸಭೆ ಅಧ್ಯಕ್ಷೆ ಟಿ.ವಿ.ಶಾಂತಾ ವಿವರಿಸಿದರು.
ತ್ರಿಕರಿಪುರ ಮಂಡಲದ ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಕೇರಳ ಬ್ಯಾಂಕ್ ನಿರ್ದೇಶಕ ಸಾಬು ಅಬ್ರಹಾಂ, ಪಂಚಾಯತ್ ಉಪಸಮಿತಿ ಅಧ್ಯಕ್ಷರು, ಸಂಚಾಲಕರು, ಇಲಾಖಾ ಅಧಿಕಾರಿಗಳು, ರಾಜಕೀಯ ಪಕ್ಷದ ಪ್ರತಿನಿಧಿಗಳು, ಮುಂತಾದವರು ಉಪಸ್ಥಿತರಿದ್ದರು.