ಜಮ್ಮು-ಕಾಶ್ಮೀರ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ಗುರುವಾರ) ವೈಷ್ಣೋದೇವಿ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ರಿಯಾಸಿ ಜಿಲ್ಲೆಯ ತ್ರಿಕೂಟ ಬೆಟ್ಟಗಳ ಮೇಲಿರುವ ದೇವಾಲಯದಲ್ಲಿ ಸ್ಕೈವಾಕ್ ಮತ್ತು ಮರುರೂಪಿಸಲಾದ ಪಾರ್ವತಿ ಭವನವನ್ನು ಉದ್ಘಾಟಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಎರಡು ದಿನಗಳ ಪ್ರವಾಸದಲ್ಲಿ ರಾಷ್ಟ್ರಪತಿ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರೊಂದಿಗೆ ದೇಗುಲಕ್ಕೆ ಭೇಟಿ ನೀಡಿದರು. ಶ್ರೀ ಮಾತಾ ವೈಷ್ಣೋದೇವಿ ಶ್ರೈನ್ ಬೋರ್ಡ್ (SMVDSB) ನ ಸಿಇಒ ಅಂಶುಲ್ ಗರ್ಗ್ ಅವರು ಯೋಜನೆಗಳ ಬಗ್ಗೆ ಮುರ್ಮು ಅವರಿಗೆ ವಿವರಿಸಿದರು.
200 ಮೀಟರ್‌ನ ಸ್ಕೈವಾಕ್ ಯಾತ್ರಿಕರ ಪ್ರಯಾಣವನ್ನು ಸುಗಮಗೊಳಿಸುತ್ತದೆ. ಇದು ಪಾವರ್ತಿ ಭವನಕ್ಕೆ ಮತ್ತು ದೇಗುಲಕ್ಕೆ ಭೇಟಿ ನೀಡಿದ ನಂತರ ಹಿಂದಿರುಗುವ ಮಾರ್ಗವನ್ನು ಪ್ರತ್ಯೇಕಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
₹9.89 ಕೋಟಿ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಟ್ರ್ಯಾಕ್ ಮಟ್ಟದಿಂದ 20 ಅಡಿ ಎತ್ತರದ ಈ ಸೌಲಭ್ಯ ಯಾತ್ರಾರ್ಥಿಗಳ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಜನದಟ್ಟನೆ ಕಡಿಮೆ ಮಾಡಲು ಮತ್ತು ಭವನದಲ್ಲಿ ಜನಸಂದಣಿ ನಿರ್ವಹಣೆಗೆ ಸಹಾಯ ಮಾಡಲು ಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾರ್ವತಿ ಭವನವನ್ನು ಸುಮಾರು ₹15 ಕೋಟಿ ವೆಚ್ಚದಲ್ಲಿ ಸಂಪೂರ್ಣವಾಗಿ ಮರುರೂಪಿಸಲಾಗಿದೆ. ಇದು ಯಾತ್ರಾರ್ಥಿಗಳಿಗೆ ಉಚಿತ ಸೌಲಭ್ಯವಾಗಿದೆ. ಯಾತ್ರಿಕರು ತಮ್ಮ ಸಾಮಾನುಗಳನ್ನು ಭದ್ರತಾ ಕೊಠಡಿಯಲ್ಲಿ ಇರಿಸಿದ ನಂತರ ನೇರವಾಗಿ ದೇಗುಲಕ್ಕೆ ಹೋಗಲು ಇದನ್ನು ಸ್ಕೈವಾಕ್‌ನೊಂದಿಗೆ ಸಂಪರ್ಕಿಸಲಾಗಿದೆ. ಇದು 1,500 ಲಾಕರ್ ಸೌಲಭ್ಯಗಳನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.