ಕಾಸರಗೋಡು: ದ್ವಾರಕಾ ನಗರದ ಶ್ರೀ ಕೃಷ್ಣ ಮಂದಿರ ದಲ್ಲಿ ನಡೆಯುತ್ತಿರುವ ಎರಡನೇ ವರ್ಷದ ಶಾರದಾ ಮಹೋತ್ಸವದ ಮೊದಲ ದಿನ ಶ್ರೀ ಸಂಸ್ಥಾನ ಗೋಕರ್ಣ, ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ಶ್ರೀ ವಿದ್ಯಾಧೀಶ ಶ್ರೀಪಾದಂಗಳವರು ಚಿತೈಸಿ ಅನುಗ್ರಹಿಸಿದರು.
ಭಕ್ತಾದಿಗಳಿಗೆ ಅಶೀರ್ವಚನ ನೀಡಿದ ಅವರು, ಕುಟುಂಬದಲ್ಲಿ ಮಾತೆ ಶ್ರೇಷ್ಠ ಸ್ಥಾನಮಾನ ಹೊಂದಿರುವಳು. ಜಗತ್ತಿಗೆ ಮಾತೆಯಾಗಿರುವ ದುರ್ಗೆ ಜಗನ್ಮಾತೆಯಾಗಿ ಪೂಜಿಸಲ್ಪಡುವ ಮಾತೆಯ ಆಶೀರ್ವಾದದ ಫಲ ಏನು ಎಂಬುದು ಜಗತ್ತಿಗೆ ಅರಿವಿದೆ. ಜಗನ್ಮಾತೆಯ ಅನುಗ್ರಹ ಸರ್ವರಿಗೂ ದೊರೆಯುವ ಫಲವಾಗಿದ್ದು ಇದನ್ನು ಪಡೆಯಲು ಆಕೆಯ ಆರಾಧನೆ ನಿತ್ಯ ನಡೆಯ ಬೇಕು ಎಂದು ತಿಳಿಸಿದರು.
ಗೋಕರ್ಣ ಪರ್ತಗಾಳಿ ಪೀಠಾಧಿಪತಿಯಾದ ಬಳಿಕ ಪ್ರಥಮ ಬಾರಿಗೆ ಕಾಸರಗೋಡಿಗೆ ಚಿತೈಸಿದ ಶ್ರೀಗಳು ಮೊದಲು ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀ ವರದರಾಜ ವೆಂಕಟ್ರಮಣ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿ ಬಳಿಕ ಶಾರದಾ ಮಹೋತ್ಸವದ ಕೃಷ್ಣ ಮಂದಿರಕ್ಕೆ ಆಗಮಿಸಿದರು. ಶ್ರೀ ಕೃಷ್ಣನ ಹಾಗೂ ಶಾರದೆಯ ಪೂಜೆ ನಡೆಸಿ ಸಭಾಕಾರ್ಯಕ್ರಮದಲ್ಲಿ ಭಕ್ತಾದಿಗಳನ್ನು ಆಶೀರ್ವದಿಸಿದರು. ಶಾರದಾ ಮಹೋತ್ಸವ ಸಮಿತಿ ಮತ್ತು ಕೃಷ್ಣ ಮಂದಿರದ ವತಿಯಿಂದ ಶ್ರೀಗಳಿಗೆ ಪಾದ ಪೂಜೆ ನಡೆಸಲಾಯಿತು.
ಕೃಷ್ಣ ಮಂದಿರದ ಮುಖ್ಯಸ್ಥ ಡಾ.ಅನಂತ ಕಾಮತ್ ಸ್ವಾಗತಿಸಿದರು. ಕೆ.ರಾಮದಾಸ ಶೆಣೈ ಕಾರ್ಯಕ್ರಮ ನಿರೂಪಿಸಿದರು.