ನವದೆಹಲಿ: ಪಾಕಿಸ್ತಾನದ ಮೇಲೆ ನಡೆದ ಬಾಲಾಕೋಟ್ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಷ್ಯಾ ನಿರ್ಮಿತ ಸುಖೋಯ್ -30ಎಂಕೆಐ ಯುದ್ಧ ವಿಮಾನಕ್ಕೆ ಹೊಸ ಸ್ವದೇಶಿ ರಾಡಾರ್‌ಗಳನ್ನು ಅಳವಡಿಸಲು ಭಾರತೀಯ ಸೇನೆ ನಿರ್ಧರಿಸಿದೆ. ಈ ರಾಡಾರ್‌ಗಳಿಗೆ ವಿಶ್ವಪ್ರಸಿದ್ಧ ಹಂಪಿ ವಿರೂಪಾಕ್ಷ ದೇವರ ಹೆಸರನ್ನಿಟ್ಟಿರುವುದು ವಿಶೇಷ.
ಪ್ರಪಂಚದಾದ್ಯಂತ ವಾಸಿಸುವ ಹಿಂದೂಗಳು ಪೂಜಿಸುವ ಮಹಾದೇವನ ಹೆಸರುಗಳಲ್ಲಿ ವಿರೂಪಾಕ್ಷ ಕೂಡ ಒಂದು.
ಈ ವಿರೂಪಾಕ್ಷ ರಾಡಾರ್ ಎಇಎಸ್‌ಎ ತಂತ್ರಜ್ಞಾನ ಅಂದರೆ ರಾಡಾರ್‌ಗಳ ಆಯಂಟೆನಾಗಳ ದಿಕ್ಕು ಬದಲಿಸದೆಯೇ ಎಲ್ಲಾ ದಿಕ್ಕುಗಳಿಗೂ ರೇಡಿಯೋ ಕಿರಣಗಳನ್ನು ಹಾಯಿಸುವ ಮೂಲಕ ತನ್ನತ್ತ ತೂರಿ ಬರುವ ಅಸ್ತ್ರಗಳನ್ನು ಪತ್ತೆ ಹಚ್ಚವ ಸಾಮರ್ಥ್ಯ ಹೊಂದಿದೆ.
ಸುಖೋಯ್ -30ಎಂಕೆಐ ಯುದ್ಧ ವಿಮಾನವನ್ನು ಸಾಕಷ್ಟು ಭಾರತೀಯ ಉಪಕರಣಗಳು ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಗಳೊಂದಿಗೆ ನವೀಕರಿಸಲು ಯೋಜಿಸುತ್ತಿದ್ದೇವೆ. ನವೀಕರಿಸಿದ ವಿಮಾನದ ಪ್ರಮುಖ ಭಾಗಗಳಲ್ಲಿ ಒಂದು ಸ್ಥಳೀಯ ವಿರೂಪಾಕ್ಷ ರಾಡಾರ್ ಆಗಿದ್ದು, ಅದು ಜೆಟ್‌ಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ಅಂದಹಾಗೆ ಇದನ್ನು ಅಭಿವೃದ್ಧಿಪಡಿಸಿದ ಡಿಆರ್‌ಡಿಒ ಇದು ಹಿಂದಿನ ರಾಡಾರ್‌ಗಿಂತ ಹೆಚ್ಚು ದಕ್ಷತೆ, ಕಡಿಮೆ ನಿರ್ವಹಣಾ ವೆಚ್ಚ ಹಾಗೂ ಜಾಮಿಂಗ್ ಮಾಡುವಲ್ಲಿ ಹೆಚ್ಚು ಪ್ರತಿರೋಧವನ್ನು ತೋರುತ್ತದೆ ಎಂದು ತಿಳಿಸಿದೆ.
ಮೊದಲ ಹಂತದಲ್ಲಿ 84 ಯುದ್ಧವಿಮಾನಗಳಿಗೆ ವಿರೂಪಾಕ್ಷ ರಾಡಾರ್ ಅಳವಡಿಸಲು ಯೋಜಿಸಲಾಗಿದೆ. ಇದಕ್ಕೆ 65 ಸಾವಿರ ಕೋಟಿ ರೂ.ವೆಚ್ಚವಾಗಲಿದೆ. ಬ್ರಹ್ಮೋಸ್ ಕ್ಷಿಪಣಿಯನ್ನು ಈಗಾಗಲೇ ವಿಯೆಟ್ನಾಮ್‌ಗೆ ರಫ್ತು ಮಾಡಿರುವ ಭಾರತವು ಮುಂದೆ ಈ ರೀತಿಯ ಯುದ್ಧ ಶಸ್ತ್ರಾಸ್ತ್ರಗಳನ್ನು ಮತ್ತಷ್ಟು ರಫ್ತು ಮಾಡಲು ಯೋಜನೆ ರೂಪಿಸಿದೆ.