ರಾಂಚಿ: ಜಾರ್ಖಂಡ್‌ನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಾಗೂ ಸಿಡಿಲು ಬಡಿದು ರಾಂಚಿಯಲ್ಲಿ ಒಬ್ಬರು ಸೇರಿದಂತೆ ಕಳೆದ 24 ಗಂಟೆಗಳಲ್ಲಿ ಎಂಟು ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಾರ್ಖಂಡ್‌ನ ಕೆಲವು ಭಾಗಗಳಲ್ಲಿ ಶನಿವಾರ ಸಂಜೆಯಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯು ಹಲವು ಜೀವಗಳನ್ನು ಬಲಿ ತೆಗೆದುಕೊಂಡಿದ್ದು, ರಸ್ತೆಗಳು ಹಾಳಾಗಿವೆ.
ಭಾನುವಾರ ರಾಂಚಿಯ ಲಾಲ್‌ಪುರ ಪ್ರದೇಶದ ಹತ್ಮಾ ಸರೈತಂಡ್‌ನಲ್ಲಿ 28 ವರ್ಷದ ಯುವಕನೊಬ್ಬ ತುಂಬಿ ಹರಿಯುತ್ತಿದ್ದ ಚರಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಇಂದು (ಸೋಮವಾರ) ಬೆಳಿಗ್ಗೆ ಘಟನೆಯ ಸ್ಥಳದಿಂದ ಸುಮಾರು 2.5 ಕಿ.ಮೀ ದೂರದಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಗೊಂಡಾ ಪೊಲೀಸ್ ಠಾಣೆಯ ಪ್ರಭಾರಿ ರವಿ ಠಾಕೂರ್ ತಿಳಿಸಿದ್ದಾರೆ.
ಜಾರ್ಖಂಡ್‌ನ ಜಮ್ತಾರಾ ಜಿಲ್ಲೆಯಲ್ಲಿ ಭಾನುವಾರ, ಸಿಡಿಲು ಬಡಿದು ಮಹಿಳೆ ಮತ್ತು ಆಕೆಯ ಮೂವರು ಮಕ್ಕಳು ಸಾವಿಗೀಡಾಗಿದ್ದಾರೆ. ಬೊಕಾರೊ ಜಿಲ್ಲೆಯಲ್ಲಿ ಮಣ್ಣಿನ ಮನೆಯ ಗೋಡೆ ಕುಸಿದು ಮಗುವೊಂದು ಮೃತಪಟ್ಟರೆ, ಪಲಾಮು ಜಿಲ್ಲೆಯ ಮಾಯಾಪುರ ಗ್ರಾಮದ ಕೊಳದಲ್ಲಿ ಮುಳುಗಿ ಒಂಬತ್ತು ಮತ್ತು ಹನ್ನೆರಡು ವರ್ಷ ವಯಸ್ಸಿನ ಇಬ್ಬರು ಬಾಲಕಿಯರು ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರಿ ಮಳೆಗೆ ಹಲವು ರಸ್ತೆಗಳ ತಿರುವುಗಳು ಮತ್ತು ಮೋರಿಗಳು ಕೊಚ್ಚಿಹೋಗಿದ್ದು, ಎಡೆಬಿಡದೆ ಸುರಿದ ಮಳೆಯಿಂದಾಗಿ ರಾಂಚಿಯ ರಾತು ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ-39ರ ತಿರುವು ಕೊಚ್ಚಿಹೋಗಿದೆ. ಪರಿಣಾಮ ರಾಂಚಿ-ಡಾಲ್ತೊಂಗಂಜ್ ಮಾರ್ಗದಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ರಾಜ್ಯದ ಹಲವು ನದಿಗಳಲ್ಲಿ ನೀರಿನ ಮಟ್ಟವು ಅಪಾಯದ ಮಟ್ಟ ತಲುಪಿದೆ.
ರಾಜ್ಯದ ರಾಜಧಾನಿ ರಾಂಚಿಯಲ್ಲಿ ಸದ್ಯ ಮಳೆಯ ತೀವ್ರತೆ ಕಡಿಮೆಯಾಗಿದ್ದರೂ, ಇಂದು (ಸೋಮವಾರ) ಭಾರಿ ಮಳೆಯಾಗುವ ಸಾಧ್ಯತೆಯಿರುವ ಕಾರಣ ಲೋಹರ್ಡಗಾ, ಗುಮ್ಲಾ ಮತ್ತು ಸಿಮ್ಡೆಗಾದಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.