ನವದೆಹಲಿ: ಮಹಾತ್ಮ ಗಾಂಧೀಜಿ ಅವರ 154ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್‌ಘಾಟ್‌ಗೆ ತೆರಳಿ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.
ಇದೇ ವೇಳೆ ಇಂದು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ವಿಜಯ ಘಾಟ್‌ನಲ್ಲಿ ಪುಷ್ಪ ಪ್ರಧಾನಿ ಮೋದಿ ನಮನ ಸಲ್ಲಿಸಿದರು.
ಅವರ ಕುರಿತು ಎಕ್ಸ್‌ನಲ್ಲಿ 'ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯಂದು ಅವರನ್ನು ಸ್ಮರಿಸುತ್ತಿದ್ದೇವೆ. ಅವರ ಸರಳತೆ, ದೇಶಕ್ಕಾಗಿ ಸಮರ್ಪಣೆ ಮತ್ತು 'ಜೈ ಜವಾನ್, ಜೈ ಕಿಸಾನ್' ಎಂಬ ಸಾಂಪ್ರದಾಯಿಕ ಕರೆ ಇಂದಿಗೂ ಪ್ರತಿಧ್ವನಿಸುತ್ತದೆ, ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಭಾರತದ ಪ್ರಗತಿಗೆ ಅವರ ಅಚಲ ಬದ್ಧತೆ ಮತ್ತು ಸವಾಲಿನ ಸಮಯದಲ್ಲಿ ಅವರ ನಾಯಕತ್ವವು ಅನುಕರಣೀಯವಾಗಿದೆ. ಬಲಿಷ್ಠ ಭಾರತಕ್ಕಾಗಿ ಅವರ ದೃಷ್ಟಿಕೋನವನ್ನು ಸಾಕಾರಗೊಳಿಸಲು ನಾವು ಯಾವಾಗಲೂ ಕೆಲಸ ಮಾಡೋಣ' ಎಂದು ಬರೆದುಕೊಂಡಿದ್ದಾರೆ.
ರಾಜ್‌ಘಾಟ್‌ಗೆ ಭೇಟಿ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ಸ್ಪೀಕರ್ ಓಂ ಬರ್ಲಾ ಸೇರಿ ಹಲವು ಗಣ್ಯರು ಗಾಂಧೀಜಿ ಅವರಿಗೆ ನಮನ ಸಲ್ಲಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಕ್ಸ್‌ನಲ್ಲಿ 'ಮಹಾತ್ಮ ಗಾಂಧಿಯವರು ಸತ್ಯ, ಅಹಿಂಸೆ ಮತ್ತು ಸಾಮರಸ್ಯದ ಹಾದಿ, ಭಾರತವನ್ನು ಒಂದುಗೂಡಿಸುವ ಮಾರ್ಗವನ್ನು ತೋರಿಸಿದರು. ಬಾಪು ಅವರ ಜನ್ಮದಿನದಂದು ಅವರಿಗೆ ಶತ ನಮನಗಳು' ಎಂದು ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ಪ್ರತಿ ವರ್ಷ ಅಕ್ಟೋಬರ್ 2 ರಂದು ಗಾಂಧಿ ಜಯಂತಿಯನ್ನು ಅಂತರರಾಷ್ಟ್ರೀಯ ಅಹಿಂಸಾ ದಿನವಾಗಿ ಆಚರಿಸಲಾಗುತ್ತದೆ.
ಗಾಂಧೀಜಿ ಜನ್ಮದಿನದ ಅಂಗವಾಗಿ ನಿನ್ನೆ (ಅ.1)ದೇಶದಾದ್ಯಂತ ಪ್ರಧಾನಿ ಮೋದಿ ಕರೆಕೊಟ್ಟ ಸ್ವಚ್ಛತಾ ಅಭಿಯಾನಕ್ಕೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದೆ. ಹಳ್ಳಿ, ನಗರ, ಶಾಲೆ, ರಸ್ತೆಗಳಲ್ಲಿ ಜನರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.